ಬೆಂಗಳೂರು: ಕಾಂಗ್ರೆಸ್ನವರು ತೂಕ ಇಳಿಸಿಕೊಳ್ಳಲು, ಬೆಂಗಳೂರು ನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ, ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ ಸೇರಿದಂತೆ ಹಲವು ಟೀಕೆಗಳನ್ನು ಬಿಜೆಪಿಯವರು ಮಾಡಿದ್ದರು. ಆ ಎಲ್ಲ ಟೀಕೆಗಳಿಗೆ ಜನರೇ ಉತ್ತರ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರದಂದು, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದ ಜನತೆಗೆ ಧನ್ಯವಾದ: ಶುಕ್ರವಾರ(ಇಂದು) ಬಜೆಟ್ ಅಧಿವೇಶನ ಇರುವುದರಿಂದ ನಮ್ಮ ಪಾದಯಾತ್ರೆಯನ್ನು ಎರಡು ದಿನ ಕಡಿತಗೊಳಿಸಿ ಇಂದೇ(ಗುರುವಾರ) ಮುಕ್ತಾಯಗೊಳಿಸುತ್ತಿದ್ದೇವೆ. ರಾಮನಗರದಿಂದ ಬೆಂಗಳೂರಿನವರೆಗೆ ನಮ್ಮ ಪಾದಯಾತ್ರೆಗೆ ಜನ ಅತಿ ಹೆಚ್ಚು ಬೆಂಬಲ ನೀಡಿದ್ದಾರೆ. ನಮ್ಮೊಂದಿಗೆ ನಿಂತ ಎಲ್ಲರಿಗೂ ಪಕ್ಷದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ. ಶಿವರಾತ್ರಿ ದಿನ ಕಡಿಮೆ ಜನರು ಸೇರಬಹುದು ಎಂಬ ಅಂದುಕೊಂಡಿದ್ದೆವು. ಆದರೆ, ಅಂದೇ ಅತಿ ಹೆಚ್ಚು ಜನರು ಸೇರಿದ್ದರು. ಅಂದರೆ ಹೋರಾಟದ ಮಹತ್ವ ರಾಜ್ಯದ ಜನರಿಗೆ ಅರ್ಥವಾಗಿದೆ ಎಂದರ್ಥ ಎಂದು ಹೇಳಿದರು.
ಕಾವೇರಿ ವಿವಾದದ ಅಂತಿಮ ತೀರ್ಪು ಬಂದ ನಂತರ ನಾವು ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಬಿಡಬೇಕಾಯಿತು. ಇದಲ್ಲದೇ ಕಳೆದ ಏಳು ವರ್ಷಗಳಲ್ಲಿ ಮಳೆಗಾಲ ಹಾಗೂ ಇನ್ನಿತರೆ ಸಮಯದಲ್ಲಿ ಒಟ್ಟು 582 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿನ ಸಮುದ್ರ ಸೇರಿದೆ. ಹೀಗೆ ಸಮುದ್ರ ಪಾಲಾಗಿ ವ್ಯರ್ಥವಾಗುತ್ತಿರುವ ನೀರನ್ನು ನಾವು ಸದುಪಯೋಗ ಮಾಡಿಕೊಂಡರೆ ಏನು ತಪ್ಪು? ಎಂದು ಪ್ರಶ್ನಿಸಿದರು.
ಕರಾವಳಿ ಜಿಲ್ಲೆಗಳು ಕೋಮುವಾದದ ಪ್ರಯೋಗ ಶಾಲೆಯಾಗಿವೆ: ಈ ಹಿಂದೆಯೂ ನಾವು ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿದ್ದೆವು. ಅದರಿಂದ ಕೆಲವರು ಜೈಲು ಸೇರಿದ್ರು, ಅಕ್ರಮ ಗಣಿಗಾರಿಕೆ ನಿಂತಿತು. ಜಿ. ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎರಡು ಪಾದಯಾತ್ರೆ ಮಾಡಿದ್ದೆವು. ಮೊದಲನೆಯದು ಉಳ್ಳಾಲದಿಂದ ಉಡುಪಿವರೆಗೆ 'ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ' ಎಂಬ ಪಾದಯಾತ್ರೆ ಮಾಡಿದ್ದೆವು. ಆದರೆ ಇಂದು ರಾಜ್ಯದ ಕರಾವಳಿ ಜಿಲ್ಲೆಗಳು ಕೋಮುವಾದದ ಪ್ರಯೋಗ ಶಾಲೆಯಾಗಿದೆ.
ಗಲಭೆಗಳು ನಿರಂತರವಾಗಿ ನಡೆಯುತ್ತಿದೆ, ಕೊಲೆಗಳಾಗುತ್ತಿವೆ. ಎರಡನೆಯದು ಹೊಸಪೇಟೆಯಿಂದ ಸಂಗಮದ ವರೆಗೆ ಪಾದಯಾತ್ರೆ ಮಾಡಿದ್ದೆವು. ಅದನ್ನು ಕೂಡ ತಿರುಚಿ ಅಪಪ್ರಚಾರ ಮಾಡಿದ್ರು. ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10,000 ಕೋಟಿ ರೂಪಾಯಿ ಖರ್ಚು ಮಾಡ್ತೀವಿ ಎಂಬ ಭರವಸೆ ನೀಡಿದ್ದೆವು, ಅದನ್ನು ತಿರುಚಿ ಸಿದ್ದರಾಮಯ್ಯ ಅವರು ಕೃಷ್ಣ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10,000 ಕೋಟಿ ರೂಪಾಯಿ ಕೊಡುತ್ತೀನಿ ಅಂದಿದ್ರು ಎಂದು ಸುಳ್ಳು ಪ್ರಚಾರ ಮಾಡಿದ್ರು ಎಂದು ಅಸಮಾಧಾನ ಹೊರಹಾಕಿದ್ರು.
ಸಾಧನೆ ಬಗ್ಗೆ ಮಾತನಾಡೋಕೆ ನಾಚಿಕೆಯಾಗಬೇಕು: ಬಿಜೆಪಿಯವರು ಐದು ವರ್ಷಗಳಲ್ಲಿ ನೀರಾವರಿಗೆ ಒಂದೂವರೆ ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಅಂದರೆ ಪ್ರತಿ ವರ್ಷ ಕನಿಷ್ಠ ರೂ. 30,000 ಕೋಟಿ ಖರ್ಚು ಮಾಡಬೇಕು. ಆದರೆ ಕಳೆದ ಮೂರು ವರ್ಷದಲ್ಲಿ ಬಿಜೆಪಿ ಸರ್ಕಾರ ರೂ. 40,000 ಕೋಟಿ ಹಣವನ್ನು ಮಾತ್ರ ಖರ್ಚು ಮಾಡಿದೆ. ಇಂಥವರಿಗೆ ನಮ್ಮ ಸರ್ಕಾರದ ಸಾಧನೆ ಬಗ್ಗೆ ಮಾತನಾಡೋಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಡಿಗಳ ಸರ್ಕಾರ:ಮೇಕೆದಾಟು ಜಾರಿಯಾದ್ರೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕೆಗಳಿಗೆ ನೀಡಬಹುದು. ಜೊತೆಗೆ ಬೇಸಿಗೆ ಕಾಲದಲ್ಲಿ ರಾಜ್ಯದ ಹೇಮಾವತಿ, ಹಾರಂಗಿ, ಕೆ.ಆರ್.ಎಸ್ ಮುಂತಾದ ಅಣೆಕಟ್ಟುಗಳಲ್ಲಿ ನೀರಿಲ್ಲದೇ ಹೋದಾಗ ಮೇಕೆದಾಟು ಇಂದ ನೀರು ಹರಿಸಬಹುದು. ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಕೊಡಬಹುದು. ಸಮುದ್ರ ಪಾಲಾಗುವ ವ್ಯರ್ಥ ನೀರಿನ ಸದ್ಭಳಕೆ ಇದರಿಂದಾಗುತ್ತದೆ. ಇದು ಕೇಂದ್ರ ಸರ್ಕಾರಕ್ಕೆ ಏಕೆ ಅರ್ಥವಾಗ್ತಿಲ್ಲ.
ಕುಡಿಯುವ ನೀರಿನ ಯೋಜನೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯದಿಂದ ಬಿಜೆಪಿಯ 25 ಜನ ಸಂಸದರು ಆಯ್ಕೆಯಾಗಿ ಸಂಸತ್ತಿಗೆ ಹೋಗಿದ್ದಾರೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇದೆ. ಕಳೆದ ಮೂರು ವರ್ಷದಲ್ಲಿ ಒಂದು ಪರಿಸರ ಅನುಮತಿ ಪತ್ರ ಪಡೆಯಲು ಡಬ್ಬಲ್ ಇಂಜಿನ್ ಸರ್ಕಾರಕ್ಕೆ ಆಗಿಲ್ಲವೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಕಾರಜೋಳ ಅವರನ್ನು ಕೇಳಿದ್ರೆ ಅದಕ್ಕೆ ಉತ್ತರ ಕೊಡಲ್ಲ. ಅದಕ್ಕೆ ಈ ಸರ್ಕಾರವನ್ನು ಹೇಡಿಗಳ ಸರ್ಕಾರ ಎಂದು ನಾನು ಕರೆದಿದ್ದು ಎಂದರು.