ಬೆಂಗಳೂರು :ರಾತ್ರಿ ಹೊತ್ತು ಹೆಚ್ಚುತ್ತಿರುವ ಅಪರಾಧಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಹೊಸ ಇ-ಬೀಟ್ ವಿಧಾನ ಜಾರಿಗೆ ಬಂದಿದೆ. ಪೇಮೆಂಟ್ ಆ್ಯಪ್‌ಗಳ ರೀತಿಯಲ್ಲಿ ಇಲ್ಲಿಯೂ ಕ್ಯೂಆರ್ ಕೋಡ್ ಸ್ಕ್ಯಾನ್ ಆಗಲಿದ್ದು, ಕುಳಿತಲ್ಲಿಯೇ ನೈಟ್ ಬೀಟ್ ಮಾಹಿತಿಯನ್ನು ಹಿರಿಯ ಅಧಿಕಾರಿಗಳು ಕಲೆ ಹಾಕಲಿದ್ದಾರೆ.
ರಾತ್ರಿ ಗಸ್ತು ವ್ಯವಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ನಗರದಲ್ಲಿ ಜಾರಿಗೆ ಬಂದಿದೆ. ಈ ಸಿಸ್ಟಮ್ನಿಂದ ಕೆಲ ಪೊಲೀಸ್ ಸಿಬ್ಬಂದಿಯ ಕಳ್ಳಾಟಕ್ಕೂ ಬ್ರೇಕ್ ಬೀಳಲಿದೆ. ಬೆಂಗಳೂರು ನಗರದ ಉತ್ತರ ವಿಭಾಗದಲ್ಲಿ 'ಸುಭಾಹು' ಸಿಸ್ಟಮ್ ಜಾರಿ ಮಾಡಿದ್ದೇವೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.
ಹೊಸ ಆಲೋಚನೆಗೆ ಶಹಬ್ಬಾಶ್ ಗಿರಿ ವ್ಯಕ್ತಪಡಿಸುತ್ತಾ ರಾತ್ರಿ ವೇಳೆ ಕ್ರೈಂ ರೇಟ್ ಹೆಚ್ಚುತ್ತಿರುವ ಹಿನ್ನೆಲೆ ಇ-ಬೀಟ್ ವ್ಯವಸ್ಥೆ ಮಾಡಲಾಗಿದೆ. ಹೊಸ ಸುಭಾಹು ಇ-ಬೀಟ್ ವ್ಯವಸ್ಥೆ ಬಹುತೇಕ ಎಲ್ಲಾ ಠಾಣೆಗಳಲ್ಲಿ ಜಾರಿ ಮಾಡಿದ್ದೇವೆ ಎಂದಿದ್ದಾರೆ.
ಏನಿದು"ಸುಭಾಹು ಇ-ಬೀಟ್" ಸಿಸ್ಟಮ್..?
ರಾತ್ರಿ ಗಸ್ತನ್ನು ತಂತ್ರಜ್ಞಾನದ ಮೂಲಕ ಆಪರೇಟ್ ಮಾಡುವ ವಿಧಾನ ಇದಾಗಿದ್ದು. ರಾತ್ರಿ ಪಾಳಯದ ಸಿಬ್ಬಂದಿ ಕಡ್ಡಾಯವಾಗಿ ಈ ಆ್ಯಪ್ನಲ್ಲಿ ಲಾಗ್ ಇನ್ ಆಗಲೇಬೇಕು ಎಂದು ಸೂಚನೆ ನೀಡಲಾಗಿದೆ. ನಿಯೋಜಿತ ಸ್ಪಾಟ್ನಲ್ಲಿ ಕ್ಯೂಆರ್ ಕೋಡ್ನ ಅಳವಡಿಸಲಾಗಿದ್ದು, ಲೊಕೇಶನ್ ವಿಸಿಟ್ ಮಾಡಿಯೇ ಕೋಡ್ ಅನ್ನು ಸಿಬ್ಬಂದಿ ಸ್ಕ್ಯಾನ್ ಮಾಡಬೇಕಿದೆ. ಯಾವ ಸಿಬ್ಬಂದಿ ಎಷ್ಟು ಟೈಂಗೆ ವಿಸಿಟ್ ಮಾಡಿದರು ಎನ್ನುವುದು ಪಕ್ಕಾ ರೆಕಾರ್ಡ್ ಆಗಲಿದೆ.
ರಾತ್ರಿ ಬೀಟ್ನಲ್ಲಿ ಎಲ್ಲಾ ಪಾಯಿಂಟ್ಗಳ ವಿಸಿಟ್ ಮಾಡಿದ ಬಳಿಕ ಅಧಿಕಾರಿಗಳಿಂದ ಆ್ಯಪ್ ಪರಿಶೀಲನೆ ನಡೆಯಲಿದೆ. ತುರ್ತು ಪರಿಸ್ಥಿತಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚಾಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ವೇಳೆ ಏನೇ ಘಟನೆ ಆದರೂ ವಿಡಿಯೋ, ಫೋಟೋ ಸಹ ಅಪ್ಲೋಡ್ ಮಾಡಬಹುದು.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಬಳಿಕ ಪೋಟೋ ವಿಡಿಯೋ ಸಹ ಅಪ್ಲೋಡ್ ಮಾಡಬಹುದಾಗಿದ್ದರಿಂದ ಹತ್ತಾರು ಆಯ್ಕೆಗಳ ಮೂಲಕ ನೈಟ್ ಬೀಟ್ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಈ ಎಲ್ಲಾ ಚಟುವಟಿಕೆ ಕುರಿತು ಆ್ಯಪ್ ಮೂಲಕವೇ ಡಿಸಿಪಿ ಮಾನಿಟರ್ ಮಾಡಲಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.
ಇದನ್ನೂ ಓದಿ:ಚಿಂದಿ ಆಯುವ ಮಹಿಳೆಯ ಇಂಗ್ಲಿಷ್ ಕೌಶಲ್ಯ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ ವಿಡಿಯೋ