ಕರ್ನಾಟಕ

karnataka

ETV Bharat / city

ಆಡಳಿತ-ಪ್ರತಿಪಕ್ಷಗಳ ಆಂತರಿಕ ಕಚ್ಚಾಟ: ಕುತೂಹಲ ಮೂಡಿಸಿರುವ ನಾಳೆಯ ಅಧಿವೇಶನ - bangalore news

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ನಂತರ ಮೊದಲ ಬಾರಿ ರಾಜ್ಯ ವಿಧಾನಮಂಡಲ ಅಧಿವೇಶನ ನಾಳೆ ಆರಂಭವಾಗಲಿದೆ.

ಆಡಳಿತ ಪಕ್ಷ,ವಿರೋಧ ಪಕ್ಷಗಳ ಆಂತರಿಕ ಕಚ್ಚಾಟದ ನಡುವೆ ಕುತೂಹಲ ಮೂಡಿಸಿರುವ ನಾಳೆಯ ವಿಧಾನಮಂಡಲ ಅಧಿವೇಶನ

By

Published : Oct 9, 2019, 8:25 PM IST

ಬೆಂಗಳೂರು: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ನಂತರ ಮೊದಲ ಬಾರಿ ರಾಜ್ಯ ವಿಧಾನಮಂಡಲ ಅಧಿವೇಶನ ನಾಳೆ ಆರಂಭವಾಗಲಿದೆ.

ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ಭಾರೀ ಅನಾಹುತವಾಗಿದ್ದು, ಪರಿಹಾರ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂಬ ಕೂಗು ವಿರೋಧ ಪಕ್ಷಗಳಿಂದ ಮಾತ್ರವಲ್ಲ ಆಡಳಿತ ಪಕ್ಷದಿಂದಲೂ ಕೇಳಿ ಬರುವ ಸಾಧ್ಯತೆಗಳಿವೆ. ಪ್ರವಾಹದಿಂದಾಗಿ 38 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಕಳಿಸಿದ್ದ ವರದಿ ಸಮರ್ಪಕವಾಗಿಲ್ಲ ಎಂದು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎನ್ನಲಾಗಿದೆ. ಪರಿಹಾರ ಕಾರ್ಯಕ್ಕಾಗಿ ಕೇವಲ 1,200 ಕೋಟಿ ರೂ. ಬಿಡುಗಡೆ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರಕ್ಕೆ ನಂಬಿಕೆ ಇಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಕೇಂದ್ರ ಅನುಮಾನದ ಕಣ್ಣುಗಳಿಂದ ನೋಡುತ್ತಿದೆ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಈ ಹಿನ್ನೆಲೆ ವಿಧಾನಮಂಡಲ ಅಧಿವೇಶನದಲ್ಲೂ ಆ ವಿಷಯ ಕೋಲಾಹಲಕ್ಕೆ ಕಾರಣವಾಗಲಿದ್ದು, ಪ್ರತಿಪಕ್ಷಗಳ ದಾಳಿಗೆ ಆಡಳಿತ ಪಕ್ಷ ನಲುಗುವ ಸಾಧ್ಯತೆ ಇದೆ.

ಸಮ್ಮಿಶ್ರ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಬೊಕ್ಕಸ ಖಾಲಿ ಮಾಡಿ ಹೋಗಿದೆ ಎಂದು ಬಿಜೆಪಿ ಸರ್ಕಾರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಈ ವಿಷಯದಲ್ಲೂ ಆಡಳಿತ-ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದ ನಡೆಯುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರ ರಾಜ್ಯದ ಸಂಕಷ್ಟಕ್ಕೆ ಸಕಾಲದಲ್ಲಿ ಸ್ಪಂದಿಸಲಿಲ್ಲ ಎಂಬ ಕುರಿತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸಹ ಪ್ರತಿಪಕ್ಷಗಳ ಪಾಲಿಗೆ ಹರಿತದ ಅಸ್ತ್ರವಾಗಲಿದೆ. ಈ ಮಧ್ಯೆ ಕೇಂದ್ರ ಸರ್ಕಾರ ರಾಜ್ಯದ ಪ್ರತಿಪಕ್ಷಗಳ ನಾಯಕರನ್ನು ಸಾಂವಿಧಾನಿಕ ಸಂಸ್ಥೆಗಳ ಮೂಲಕ ಹೆದರಿಸುತ್ತಿದೆ. ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಈ ಹಿನ್ನೆಲೆಯಲ್ಲಿ ಬಗ್ಗು ಬಡಿಯುವ ಯತ್ನ ಮಾಡಿದೆ ಎಂಬ ವಿಷಯ ಪ್ರತಿಪಕ್ಷ ಕಾಂಗ್ರೆಸ್​ನಿಂದ ಹೊರಬರುವ ಸಾಧ್ಯತೆಯಿದೆ.

ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾಲ್ಕು ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಿದೆ. ಇದರ ಪರಿಣಾಮವಾಗಿ ಇದು ಅಭಿವೃದ್ಧಿ ಪರ ಸರ್ಕಾರವಲ್ಲ. ವರ್ಗಾವಣೆ ದಂಧೆಯ ಸರ್ಕಾರ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುವುದು ಬಹುತೇಕ ಖಚಿತವಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನ ಕಳೆದರೂ ಆಡಳಿತ ಯಂತ್ರ ಟೇಕ್​ ಆಫ್​​ ಆಗಿಲ್ಲ ಎಂಬ ಕೂಗು ಕೇಳಿ ಬರಲಿದೆ.

ಈ ಬಾರಿಯ ವಿಧಾನಮಂಡಲ ಅಧಿವೇಶನವನ್ನು ಮೂರು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದ್ದು, ಮೈತ್ರಿ ಸರ್ಕಾರ ಮಂಡಿಸಿದ್ದ ಬಜೆಟ್​ ಅಂಗೀಕಾರ ಪಡೆಯುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ಅದೇ ರೀತಿ ನೆರೆ ಪರಿಹಾರ ಕಾರ್ಯಕ್ಕೆ ಅನುಕೂಲವಾಗುವಂತೆ ಸದ್ಯದ ಬಜೆಟ್ ಜೊತೆಗೆ ಪೂರಕ ಅಂದಾಜುಗಳ ಬಜೆಟ್ ಮಂಡಿಸುವುದು ಮತ್ತು ವಿಧಾನಮಂಡಲದ ಅಂಗೀಕಾರ ಪಡೆಯುವುದು ಸರ್ಕಾರದ ಉದ್ದೇಶವಾಗಿದೆ. ಹಾಗಾಗಿ ನಾಳೆ ಆರಂಭವಾಗುವ ವಿಧಾನಮಂಡಲ ಅಧಿವೇಶನ ಕುತೂಹಲ ಮೂಡಿಸಿದೆ.

ABOUT THE AUTHOR

...view details