ಕರ್ನಾಟಕ

karnataka

By

Published : Jul 9, 2021, 3:08 PM IST

ETV Bharat / city

ಹಾದಿಬೀದಿಯಲ್ಲಿ ಮಾಡುವ ಆರೋಪಕ್ಕೆ ಪ್ರತಿಕ್ರಿಯೆ ನೀಡಲ್ಲ: ಬಿಜೆಪಿ

ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಎಂ.ಸುಧೀಂದ್ರರಾವ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ಲಂಚ ಪಡೆದಿತ್ತು ಎಂದು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ರಾಜ್ಯ ಬಿಜೆಪಿ ಘಟಕ ನಿರಾಕರಿಸಿದೆ.

ಬಿಜೆಪಿ
State BJP unit

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ‌ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ಲಂಚ ಪಡೆದಿತ್ತು ಎಂದು ಕೆಎಸ್​ಪಿಬಿಸಿ ಮಾಜಿ ಅಧ್ಯಕ್ಷ ಸುಧೀಂದ್ರ ರಾವ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಲು ರಾಜ್ಯ ಬಿಜೆಪಿ ಘಟಕ ನಿರಾಕರಿಸಿದೆ. ಹಾದಿ ಬೀದಿಯಲ್ಲಿ ಮಾಡುವ ಆರೋಪಕ್ಕೆ ಪಕ್ಷ ಪ್ರತಿಕ್ರಿಯೆ ನೀಡುವುದಿಲ್ಲ, ಪಕ್ಷದ ವೇದಿಕೆಗೆ ಬಂದು ದೂರು ನೀಡಲಿ ಎಂದು ತಿಳಿಸಿದೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ವಕ್ತಾರ ಅಶ್ವತ್ಥನಾರಾಯಣ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ತಮ್ಮಿಂದ ಸಿಎಂ ಕುಟುಂಬ ಹಣ ಪಡೆದಿತ್ತು. ಮನೆ, ಕಾರು ಮಾರಾಟ ಮಾಡಿ ಹಣ ನೀಡಿದ್ದೆ. ಆದರೆ ಒಂದೇ ತಿಂಗಳಿನಲ್ಲಿ ಹುದ್ದೆಯಿಂದ ತೆಗೆದಿದ್ದಾರೆ. ಇದೆಲ್ಲವನ್ನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ತರುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ. ಎಂ ಸುಧೀಂದ್ರರಾವ್ ಆರೋಪಿಸಿದ್ದಾರೆ. ಆದರೆ ಅವರು ಯಾಕೆ ಕೊಟ್ಟರು?, ಹಣ ಕೊಟ್ಟ ಮೇಲೆ ಅವರೇನು ಸಾಚಾನಾ?, ಸಿಎಂ ಕುಟುಂಬ ಯಾರಿಂದಲೂ ಹಣ ಪಡೆದು ಅಧ್ಯಕ್ಷ ಸ್ಥಾನ ನೀಡಿಲ್ಲ. ಇದಕ್ಕೆಲ್ಲಾ ಪಕ್ಷ ಉತ್ತರ ನೀಡುವುದಿಲ್ಲ, ಯಾರೋ ಆರೋಪ ಮಾಡಿದ್ದಕ್ಕೆ ಪಕ್ಷ ಉತ್ತರ ನೀಡಲು ಸಾಧ್ಯವಿಲ್ಲ. ಪಕ್ಷದ ವೇದಿಕೆಯಲ್ಲಿ ಬಂದು ಅವರು ದೂರು ಕೊಡಲಿ, ಆಗ ಅದಕ್ಕೆ ಉತ್ತರ ನೀಡುತ್ತೇವೆ ಎಂದರು.

ಅನ್ವರ್ ಮಾಣಿಪ್ಪಾಡಿ, ಸುಧೀಂದ್ರರಾವ್, ವಿಶ್ವನಾಥ್ ಯಾರೇ ಆಗಲಿ ಪಕ್ಷದ ವೇದಿಕೆಗೆ ಬರಲಿ. ಪಕ್ಷದ ಅಧ್ಯಕ್ಷರಿಗೆ ದೂರು ಕೊಡಲಿ, ದಾಖಲೆಗಳನ್ನು ಕೊಡಲಿ ಆಗ ನಾವು ಉತ್ತರ ಕೊಡುತ್ತೇವೆ. ಅದನ್ನು ಬಿಟ್ಟು ಹಾದಿ-ಬೀದಿಯಲ್ಲಿ ಮಾತನಾಡಿದರೆ ಅದೆಕ್ಕೆಲ್ಲಾ ನಾವು ಉತ್ತರ ಕೊಡುವುದಿಲ್ಲ. ಅಧಿಕೃತವಾಗಿ ಪಕ್ಷದ ಅಧ್ಯಕ್ಷರಿಗೆ ದೂರು ನೀಡಿದರೆ ಅದಕ್ಕೆ ಪಕ್ಷ ಉತ್ತರ ಕೊಡಲಿದೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಇಂತಹ ಆರೋಪಗಳ ಬಗ್ಗೆ ನಾವು ಹೇಳಿಕೆ ಕೊಡುವುದಿಲ್ಲ. ನಿಜವಾಗಿಯೂ ಆ ರೀತಿ ಇದ್ದರೆ ಗಮನಕ್ಕೆ ತರಲಿ, ಈ ರೀತಿ ಅನೇಕ ಆರೋಪಗಳನ್ನು ಮಾಡಿದ್ದಾರೆ. ಅವರೂ ಸಹ ಪಕ್ಷಕ್ಕೆ ಸೇರಿದವರಾಗಿದ್ದು, ಪಕ್ಷದ ವೇದಿಕೆಯಲ್ಲಿ ದೂರು ನೀಡಲಿ ಆಗ ಪಕ್ಷ ಅದಕ್ಕೆ ಉತ್ತರ ನೀಡಲಿದೆ ಎಂದರು.

ಆರೋಪದ ಹಿನ್ನೆಲೆ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾದ ನಂತರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಡಾ.ಸುಧೀಂದ್ರರಾವ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ನೇಮಕಾತಿ ಕುರಿತು ಆಕ್ಷೇಪ ವ್ಯಕ್ತವಾಗಿ, ನಿಯಮ ಉಲ್ಲಂಘಿಸಿ ನೇಮಕ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಕಾನೂನುಬದ್ಧವಾಗಿ ನೇಮಕಾತಿ ನಡೆದಿಲ್ಲ ಎಂದು ಹೈಕೋರ್ಟ್​ನಲ್ಲಿ ತಪ್ಪೊಪ್ಪಿಕೊಂಡಿದ್ದ ರಾಜ್ಯ ಸರ್ಕಾರ, ಸುಧೀಂದ್ರ ರಾವ್ ಅವರಿಂದ ರಾಜೀನಾಮೆ ಪಡೆದುಕೊಂಡಿತ್ತು.

For All Latest Updates

ABOUT THE AUTHOR

...view details