ಬೆಂಗಳೂರು:ಹಲವು ಕಾರಣಗಳಿಂದ ಕುಂಟುತ್ತ ಸಾಗಿದ್ದಶಿವನಾಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಲೋಕಾರ್ಪಣೆಗೆ ಮುಹೂರ್ತ ಕೂಡಿ ಬಂದಿದೆ. ಕಳೆದ 5 ವರ್ಷಗಳಿಂದ ತಯಾರಾಗುತ್ತಿರುವ ಮೇಲ್ಸೇತುವೆಗೆ ಆ.15 ರಂದು ಸಂಚಾರದ ಭಾಗ್ಯ ಸಿಗಲಿದೆ. ಕೆಲ ಕಾನೂನಾತ್ಮಕ ತೊಡಕಿನಿಂದ ಕಾಮಗಾರಿ ಕಳೆದ 5 ವರ್ಷಗಳಿಂದ ಅರ್ಧಕ್ಕೆ ನಿಂತಿತ್ತು. ಆದರೆ ಈಗ ಹೈಕೋರ್ಟ್ ಆದೇಶದಂತೆ ಬ್ರಿಡ್ಜ್ ಓಪನ್ ಮಾಡಲು ಬಿಬಿಎಂಪಿ ಮುಂದಾಗಿದೆ.
ಮೇಲ್ಸೇತುವೆಯಿಂದ ಶೇಷಾದ್ರಿಪುರದ ಕಡೆಗೆ ಇಳಿಜಾರು ನಿರ್ಮಿಸಲು ಭೂಸ್ವಾಧೀನಕ್ಕೆ ಸ್ಥಳೀಯರಿಂದ 40 ಕೋಟಿ ರೂ. ಬೇಡಿಕೆ ಬಂದಿತು. ಇಷ್ಟೊಂದು ವೆಚ್ಚ ಪಾವತಿಸಲಾಗದ ಪಾಲಿಕೆ ಡೌನ್ ರ‍್ಯಾಂಪ್‌ನ ವಿನ್ಯಾಸವನ್ನು ಬದಲಾಯಿಸಿತು. ಈ ವಿನ್ಯಾಸದ ಬಗ್ಗೆ ಸಾರ್ವಜನಿಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಈಗ ಗ್ರೀನ್ ಸಿಗ್ನಲ್ ನೀಡಿದ್ದು, ಕಾಮಗಾರಿಯ ಕೊನೆಯ ಹಂತದ ಕೆಲಸಗಳು ಭರದಿಂದ ಸಾಗಿವೆ ಎಂದು ಯೋಜನೆ ವಿಭಾಗದ ಪಾಲಿಕೆ ಮುಖ್ಯ ಅಭಿಯಂತರರಾದ ಲೋಕೇಶ್ ತಿಳಿಸಿದ್ದಾರೆ.
ಕಾಮಗಾರಿ ಶೇ.90 ರಷ್ಟು ಪೂರ್ಣ: ಫ್ಲೈ ಓವರ್ ನಿರ್ಮಾಣ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದೆ. ಶೇಷಾದ್ರಿಪುರ ಕಡೆಗೆ ಸಂಪರ್ಕಿಸುವ ಇಳಿಜಾರು ಬಳಿಯ ಕಾಲುವೆ ಅಭಿವೃದ್ಧಿಪಡಿಸಿ ಇಳಿಜಾರು ರಸ್ತೆ ನಿರ್ಮಿಸಿ ಡಾಂಬರೀಕರಣ ಮಾಡುವುದು ಮಾತ್ರ ಬಾಕಿಯಿದೆ. ಕಾಮಗಾರಿ ಪೂರ್ಣಗೊಳಿಸಲು ಅಂದಾಜು 30 ದಿನಗಳು ಬೇಕಾಗುತ್ತದೆ. ಹೀಗಾಗಿ ಸರಿ ಸುಮಾರು ಆ.15 ರಂದು ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅವರು ಮಾಹಿತಿ ನೀಡಿದರು.