ಬೆಂಗಳೂರು :ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ನಮಗೂ ಶಾಕಿಂಗ್ ಆಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.
ಕಾವೇರಿ ನಿವಾಸದ ಬಳಿ ಮಾತನಾಡಿದ ಅವರು, ನಿನ್ನೆ ರಾತ್ರಿ ಮುಖ್ಯಮಂತ್ರಿಗಳು ಹೋಗಿ ನೋಡಿಕೊಂಡು ಬಂದಿದ್ದಾರೆ. ಈಗ ಅವರ ಅರೋಗ್ಯ ಚೇತರಿಕೆ ಆಗ್ತಿದೆ. ಐಸಿಯೂನಿಂದ ವಾರ್ಡ್‌ಗೆ ಶಿಫ್ಟ್ ಆಗ್ತಾರೆ ಅಂತಾ ವೈದ್ಯರು ಹೇಳಿದ್ದಾರೆ. ನೋಡೋಣ ಅವರು ಬಂದ ಮೇಲೆ ಏನು ಸಮಸ್ಯೆ ಅಂತಾ ಕೇಳೋಣ ಎಂದು ವಿವರಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜಕೀಯ ಒತ್ತಡದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಊಹಾಪೋಹಗಳಿಗೆ ಉತ್ತರ ಕೊಡಲು ನನಗೆ ಇಷ್ಟವಿಲ್ಲ ಎಂದರು. ಮಾಧ್ಯಮಗಳಲ್ಲಿ ರಾಜೀನಾಮೆ ವಿಚಾರ ಬರ್ತಾ ಇರೋದು ನೋಡಿದೆ. ರಾಜೀನಾಮೆ ಕೊಡಿ ಅಂತಾ ಯಾರೂ ಕೇಳಿಲ್ಲ. ಯಾರಿಗೆ ಯಾವ ಸ್ಥಾನವನ್ನ ಕೊಡಬೇಕು ಅನ್ನೋದು ಮುಖ್ಯಮಂತ್ರಿಗಳಿಗೆ ಗೊತ್ತಿದೆ ಎಂದು ಸ್ಪಷ್ಟಪಡಿಸಿದರು.
ವಲಸಿಗರು ಎಂಬ ಪದ ಬಳಸಬೇಡಿ :ನಿನ್ನೆ ಕೆಲ ಸಚಿವರಿಂದ ಪ್ರತ್ಯೇಕ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್-ಜೆಡಿಎಸ್ಗೆ ರಾಜೀನಾಮೆ ಕೊಟ್ಟು ಬಂದು ಮಂತ್ರಿ ಆಗಿ ಒಂದು ವರ್ಷ ಆಗಿದೆ. ಅವರಿಗೆ ವಲಸಿಗರು ಎಂಬ ಪದ ಬಳಸಬೇಡಿ ಎಂದರು.
ಅವರು ಬಿಜೆಪಿಗೆ ಬಂದು ಶಕ್ತಿ ತುಂಬಿದ್ದಾರೆ. ಬೇರೆ ಬೇರೆ ವಿಚಾರಕ್ಕೆ ಸಂಭದಿಸಿಂತೆ ಚರ್ಚೆ ನಡೆಸಿದ್ದಾರೆ. ಇದೆಲ್ಲವನ್ನೂ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಗಮನಿಸುತ್ತಿದ್ದಾರೆ. ರಾತ್ರಿಯ ಸಚಿವರ ಸಭೆಯ ಬಗ್ಗೆ ನನಗೆ ಮಾಹಿತಿ ಇಲ್ಲ, ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು.
ಲಿಂಗಾಯತ-ವೀರಶೈವ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ರಾಷ್ಟ್ರೀಯ ನಾಯಕರು ಚರ್ಚೆ ನಡೆಸಿದ್ದಾರೆ. ಮತ್ತೊಮ್ಮೆ ಈ ಬಗ್ಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಎಲ್ಲರ ಬಳಿ ಮತ್ತೊಮ್ಮೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವ ಕೆಲಸ ಆಗಲಿದೆ ಎಂದು ಸ್ಪಷ್ಟಪಡಿಸಿದರು.