ಕರ್ನಾಟಕ

karnataka

ETV Bharat / city

ಆರೆಸ್ಸೆಸ್​ ಒಂದು ರಾಜಕೀಯ ಸಂಸ್ಥೆ ಅಲ್ಲ: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ

ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಆರೆಸ್ಸೆಸ್​ ಒಂದು ರಾಜಕೀಯ ಸಂಸ್ಥೆ ಅಲ್ಲ. ದೇಶದ ಶಾಶ್ವತ ಮೌಲ್ಯಗಳಾದ ಧರ್ಮ, ಸಂಸ್ಕೃತಿಗಳ ಆಧಾರದಲ್ಲಿ ವಸುಧೈವ ಕುಟುಂಬ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದೆ..

Former Chief Minister SM Krishna
ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ

By

Published : Oct 25, 2020, 9:10 PM IST

ಬೆಂಗಳೂರು: ಆರೆಸ್ಸೆಸ್​ ಒಂದು ರಾಜಕೀಯ ಸಂಸ್ಥೆ ಅಲ್ಲ. ದೇಶದ ಶಾಶ್ವತ ಮೌಲ್ಯಗಳಾದ ಧರ್ಮ, ಸಂಸ್ಕೃತಿಗಳ ಆಧಾರದಲ್ಲಿ ವಸುಧೈವ ಕುಟುಂಬ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಪ್ರತಿಪಾದಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘ 1925ರಲ್ಲಿ ಬಹಳ ದೂರದೃಷ್ಟಿಯಿಂದ ಆರಂಭವಾಯಿತು. ಎಂದಾದರೂ ಸ್ವಾತಂತ್ರ್ಯ ಬರುತ್ತದೆ. ಅದಕ್ಕೆ ದೇಶವನ್ನು ಸಜ್ಜುಗೊಳಿಸಬೇಕೆಂದು ಡಾ. ಹೆಡಗೇವಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಆರಂಭಿಸಿದರು. ಅವರ ಪ್ರಯತ್ನದಿಂದಾಗಿ ಇಂದು ಲಕ್ಷಾಂತರ ಸ್ವಯಂಸೇವಕರು ಸೃಷ್ಟಿಯಾಗಿದ್ದಾರೆ. ರಾಷ್ಟ್ರಭಕ್ತಿಯನ್ನು ತಮ್ಮ ಜೀವನದಲ್ಲಿ ಅಂತರ್ಗತಗೊಳಿಸಿಕೊಳ್ಳುವ ಜೊತೆಗೆ ಅದನ್ನು ಅಭಿವ್ಯಕ್ತಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದರು.

ದೇಶಕ್ಕೆ ನಾವು ಎಷ್ಟು ಸಮಯ ಇಟ್ಟಿದ್ದೇವೆ:

ರಾಷ್ಟ್ರಾಭಿಮಾನ ನಮ್ಮಲ್ಲಿ ಅಂತರ್ಗತ ಆಗಬೇಕು ಹಾಗೂ ಆ ಭಾವನೆ ಅಭಿವ್ಯಕ್ತ ಆಗಬೇಕು. ನಮ್ಮ ಪ್ರಜಾಪ್ರಭುತ್ವವನ್ನು ಸದೃಢವಾಗಿ ರೂಪಿಸಲಾಗಿದೆ. ಪ್ರಜಾಪ್ರಭುತ್ವ ಉಳಿಸಲು ಚುನಾವಣಾ ಆಯೋಗದಂತಹ ಸಂಸ್ಥೆಗಳು ಕಟುಬದ್ಧವಾಗಿವೆ. ಅಧಿಕಾರ ಕಳೆದುಕೊಂಡಾಗ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದೇಟು ಹಾಕದೆ ನಗುನಗುತ್ತ ಅಧಿಕಾರ ತ್ಯಜಿಸಿದರು. ಯಾವುದಕ್ಕೂ ಅಂಟಿಕೊಳ್ಳಬಾರದು ಎಂಬ ಈ ಮನಸ್ಥಿತಿ ಹಿಂದೂ ಧರ್ಮದ ಹಾಸುಹೊಕ್ಕಾದ ಅಂಶ. ಅಲ್ಲಿಂದಲೇ ಇಂತಹ ಪ್ರೇರಣೆ ದೊರಕುತ್ತದೆ ಎಂದರು.

ಶಿಕ್ಷಣದಲ್ಲಿ ಸುಧಾರಣೆ ಅಗತ್ಯ:

ನಮ್ಮ ಸಮಾಜವನ್ನು ಉತ್ತಮವಾಗಿ ರೂಪಿಸಲು ಶಿಕ್ಷಣದಲ್ಲಿ ಸಮಗ್ರ ಸುಧಾರಣೆ ಆಗಬೇಕು. ಆಂಗ್ಲ ಪದ್ಧತಿಯಲ್ಲೇ ನಡೆಯುತ್ತಿದೆ. ದುರದೃಷ್ಟಕರವಾಗಿ ಶಿಕ್ಷಣ ಎಂಬುದು ರಾಜ್ಯದ ವಿಷಯವಾಗಿದೆ. ಕೇಂದ್ರ ಸರ್ಕಾರ ಸಾಕಷ್ಟು ಮಧ್ಯಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಆರೆಸ್ಸೆಸ್‌ನಲ್ಲಿ ಲಕ್ಷಾಂತರ ಜನರು ತಮ್ಮನ್ನು ತಾವು ಅರ್ಪಿಸುಕೊಂಡಿದ್ದಾರೆ. ಇದು ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ.‌ ಇದನ್ನು ನಮ್ಮ ಇಳಿ ವಯಸ್ಸಿನಿಂದ ನೋಡುತ್ತಿದ್ದೇವೆ. ಇದನ್ನು ಎಳೆ ವಯಸ್ಸಿನಲ್ಲೆ ಮನಸ್ಸಿನಲ್ಲಿ ಮೂಡಿಸಿದರೆ ದೇಶದ ಆಳ ಅಗಲ ಅರಿಯಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ದೇಶ ನಿನಗೇನು ಕೊಟ್ಟಿದೆ ಎಂಬುದಕ್ಕಿಂತಲೂ ನೀನು ದೇಶಕ್ಕೆ ಏನು ಕೊಟ್ಟಿದ್ದೀಯ ಎಂಬುದನ್ನು ಕೇಳಬೇಕು ಎಂದು ಕೆನಡಿಯವರ ಮಾತನ್ನು ಭಾರತದ ಎಲ್ಲಾ ಪ್ರಜೆಗಳೂ ಕೇಳಿಕೊಂಡು ಅವರೇ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ABOUT THE AUTHOR

...view details