ಬೆಂಗಳೂರು:ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್ಗಳ ಮೀಸಲಾತಿ ಪಟ್ಟಿ ಪ್ರಕಟಿಸಿದ್ದ ಬೆನ್ನಲೇ ಅಪರಾಧ ಲೋಕದಲ್ಲಿ ಗುರುತಿಸಿಕೊಂಡಿರುವ ಕ್ರಿಮಿನಲ್ಗಳು ಚುನಾವಣೆಗೆ ನಿಲ್ಲಲು ಸದ್ದಿಲ್ಲದೇ ತಯಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣೆಗೆ ನಿಲ್ಲಲು ಗುಪ್ತ ಸಿದ್ದತೆಯಲ್ಲಿ ತೊಡಗಿರುವ ರೌಡಿಗಳ ಪಟ್ಟಿ ಸಂಗ್ರಹಿಸಿ ವರದಿ ನೀಡಲು ಸಿಸಿಬಿ(ಕೇಂದ್ರ ಅಪರಾಧ ವಿಭಾಗ) ಜಂಟಿ ಪೊಲೀಸ್ ಆಯುಕ್ತ ರಮಣ ಗುಪ್ತಾ ತಾಕೀತು ಮಾಡಿದ್ದಾರೆ.
ಇದೇ ವರ್ಷ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ಬಿಬಿಎಂಪಿ 198 ವಾರ್ಡ್ಗಳಿಂದ 243 ವಾರ್ಡ್ಗಳಿಗೆ ಏರಿಸಿ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ವಿವಿಧ ರಾಜಕೀಯ ಪಕ್ಷಗಳ ನಾಯಕರ ಮುಂದೆ ನಿಂತು ಗೆಲ್ಲುವ ಇರಾದೆಯಲ್ಲಿ ರೌಡಿಗಳಿದ್ದಾರೆ. ಇನ್ನೂ ಕೆಲ ರೌಡಿಗಳು ತಮ್ಮ ಕುಟುಂಬದ ಸದ್ಯಸರೊಬ್ಬರನ್ನ ಎಲೆಕ್ಷನ್ ಅಖಾಡಕ್ಕೆ ನಿಲ್ಲುವಂತೆ ಪರೋಕ್ಷವಾಗಿ ಸೂಚಿಸುತ್ತಿದ್ದಾರೆ. ಅಲ್ಲದೇ ತಮ್ಮ ಆಪ್ತರಿಗೂ ಚುನಾವಣಾ ಕಣದಲ್ಲಿ ನಿಂತರೆ ಬೆಂಬಲಿಸುವುದಾಗಿ ಹೇಳುತ್ತಿರುವುದು ಕಂಡು ಬಂದಿದೆ.
ಚುನಾವಣೆ ವೇಳೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರಲು ಹಾಗೂ ಶಾಂತಿಯುತ ವಾತಾವರಣ ನಿರ್ಮಿಸಲು ನಗರ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಚುನಾವಣೆಗೆ ಧುಮುಕುವ ರೌಡಿಗಳ ಬಗ್ಗೆ ನಿಗಾವಹಿಸಿ ಪಟ್ಟಿ ಸಂಗ್ರಹಿಸುವಂತೆ ಸಿಬ್ಬಂದಿಗೆ ರಮಣ ಗುಪ್ತಾ ಸೂಚಿಸಿದ್ದಾರೆ.
ಇನ್ನೊಂದು ವಾರದಲ್ಲಿ ವರದಿ:ಬಿಬಿಎಂಪಿ ಚುನಾವಣೆಗೆ ನಿಲ್ಲಲು ಸಿದ್ದತೆ ನಡೆಸುತ್ತಿರುವ ರೌಡಿಗಳ ಬಗ್ಗೆ ಮಾಹಿತಿ ಕಲೆಹಾಕಲು ಸೂಚಿಸಲಾಗಿದೆ. ಸಂಬಂಧಪಟ್ಟ ಪೊಲೀಸರು ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲಿಗೆ ಯಾವ ಯಾವ ವಾರ್ಡ್ಗಳಿಂದ ನಿಲ್ಲಲು ಸಿದ್ದತೆ ನಡೆಸುತ್ತಿದ್ದಾರೆ?, ಯಾವ ಪಕ್ಷದಿಂದ ಸ್ಪರ್ಧೆ ಅಥವಾ ಪಕ್ಷೇತರರಾಗಿ ನಿಲ್ಲುತ್ತಿದ್ದಾರಾ?, ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಯಾವ ಪಕ್ಷದಿಂದ ಟಿಕೆಟ್ ಕೇಳಿದ್ದಾರೆ?, ಯಾವ ಪಕ್ಷದಲ್ಲಿ ಎಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆ ಇರುವ ಅಭ್ಯರ್ಥಿಗಳಿದ್ದಾರೆ?, ಹಣಕಾಸು ಹಿನ್ನೆಲೆ ಏನು? ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.