ಬೆಂಗಳೂರು:ಬಂಗಾಳ ಉಪಸಾಗರದ ಉತ್ತರ ಭಾಗದಲ್ಲಿ ಜುಲೈ 28ರಂದು ವಾಯುಭಾರ ಕುಸಿತ ಉಂಟಾಗುವ ಹೆಚ್ಚಿನ ಸಾಧ್ಯತೆಯಿದೆ. ಈ ಪ್ರಭಾವದಿಂದ ರಾಜ್ಯಾದ್ಯಂತ ಜುಲೈ 30ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಜುಲೈ 30ರವರೆಗೆ ಮುಂದುವರೆಯಲಿರುವ ಮಳೆ ಆರ್ಭಟ ಕರಾವಳಿ ಜಿಲ್ಲೆಗಳ ಬಹುತೇಕ ಎಲ್ಲ ಸ್ಥಳಗಳಲ್ಲಿ ಜುಲೈ 30ರವರೆಗೆ ವ್ಯಾಪಕ ಮಳೆಯಾಗಲಿದೆ. ಉತ್ತರಕನ್ನಡ, ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಜುಲೈ 26ರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗುವ ಹೆಚ್ಚಿನ ನಿರೀಕ್ಷೆಯಿದೆ.
ನೈರುತ್ಯ ಮುಂಗಾರು ಸೋಮವಾರ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ಕಡೆ, ದಕ್ಷಿಣ ಒಳನಾಡಿನಲ್ಲಿ ಹಲವು ಭಾಗಗಳಲ್ಲಿ ಹಾಗೂ ಉತ್ತರ ಒಳನಾಡಿನಲ್ಲಿ ಕೆಲವೆಡೆ ಮಾತ್ರ ಮಳೆಯಾಗಿದೆ.
ಮುಖ್ಯವಾಗಿ ಕೊಡಗಿನ ಭಾಗಮಂಡಲದಲ್ಲಿ 13 ಸೆಂ.ಮೀ, ದಕ್ಷಿಣ ಕನ್ನಡದ ಸುಬ್ರಮಣ್ಯದಲ್ಲಿ 11 ಸೆಂ.ಮೀ, ಪುತ್ತೂರು ಹಾಗೂ ಉಪ್ಪಿನಂಗಡಿಯಲ್ಲಿ ತಲಾ 10 ಸೆಂ.ಮೀ, ಸುಳ್ಯ, ಕೊಡಗಿನ ವಿರಾಜಪೇಟೆಯಲ್ಲಿ ತಲಾ 9 ಸೆಂ.ಮೀ, ಧರ್ಮಸ್ಥಳ, ಬೆಳ್ತಂಗಡಿಯಲ್ಲಿ ತಲಾ 8 ಸೆಂ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ್ದರೂ 'ಅಪೂರ್ಣಾವಧಿ' ಅಪಕೀರ್ತಿ ಹೊತ್ತ ಶಿವಮೊಗ್ಗ