ಬೆಂಗಳೂರು :ಅರ್ಚಕರ ಬಾಕಿ ತಸ್ತೀಕ್ ಹಣವನ್ನು ಬಿಡುಗಡೆಗೆ ಆದೇಶ ಹೊರಡಿಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು. ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಶ್ನೋತ್ತರ ಅವಧಿಯಲ್ಲಿ ಎತ್ತಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಿಎಂ ಉತ್ತರಿಸಿದರು.
ಸರ್ಕಾರ ತಾಂತ್ರಿಕ ಕಾರಣದಿಂದ ತಸ್ತೀಕ್ ಹಣ ಬಿಡುಗಡೆಯಲ್ಲಿ ಲೋಪ ಆಗೋದಕ್ಕೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ಪ್ರಕ್ರಿಯೆಯನ್ನು ಸರಳೀಕರಿಸಲಾಗುತ್ತದೆ. ಖಾನಾಪುರ ಕ್ಷೇತ್ರದಲ್ಲಿ ಬಾಕಿ ಇರುವ ಅನುದಾನ ಬಿಡುಗಡೆ ಮಾಡುತ್ತೇನೆ.
ಜೊತೆಗೆ ಇಡೀ ಕರ್ನಾಟಕದಲ್ಲಿ ಬಾಕಿ ಇರುವ ತಸ್ತೀಕ್ ಹಣ ಬಿಡುಗಡೆ ಮಾಡಲು ಆದೇಶ ಹೊರಡಿಸುತ್ತೇನೆ. ತಸ್ತೀಕ್ ಹೆಚ್ಚಳ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.
ಇದಕ್ಕೂ ಮುಂಚೆ ದನಿಗೂಡಿಸಿದ ದಿನೇಶ್ ಗುಂಡೂರಾವ್, ತಸ್ತೀಕ್ ಆರಂಭಿಸಿದ್ದು ನಮ್ಮ ತಂದೆಯವರ ಅವಧಿಯಲ್ಲಿ. ಸಿದ್ದರಾಮಯ್ಯ ಅವಧಿಯಲ್ಲಿ 48 ಸಾವಿರ ರೂ. ಏರಿಕೆ ಮಾಡಿದ್ರು. ಈಗ ಬರುವ ಅನುದಾನ ಕೂಡ ಸಿಗ್ತಿಲ್ಲ. ಹಾಗಾಗಿ, ಈ ಅನುದಾನವನ್ನ ಬಿಡುಗಡೆ ಮಾಡಿ. ಜೊತೆಗೆ ಅರ್ಚಕರ ಅನುದಾನ ಹೆಚ್ಚಳ ಮಾಡಿ ಎಂದು ಒತ್ತಾಯಿಸಿದರು.