ಬೆಂಗಳೂರು :889ನೇ ವಿಶ್ವ ಬಸವ ಜಯಂತ್ಯೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಶುಭ ಕೋರಿದ್ದಾರೆ. ಪ್ರಧಾನಿ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿ ಬಸವೇಶ್ವರರ ಕುರಿತು ಮಾಡಿದ್ದ ಭಾಷಣವನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. 'ಬಸವ ಜಯಂತಿಯ ಈ ಶುಭ ಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳು. ಬಸವಣ್ಣನವರ ಚಿಂತನೆ, ಬೋಧನೆ ಹಾಗು ತತ್ವಾದರ್ಶಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಶಕ್ತಿ ತುಂಬುತ್ತಿದೆ' ಎಂದು ಟ್ವೀಟ್ ಮಾಡಿರುವ ಪ್ರಧಾನಿ ಜಗಜ್ಯೋತಿ ಬಸವೇಶ್ವರರ ಕುರಿತು 2020ರಲ್ಲಿ ಅವರು ಮಾಡಿದ್ದ ಭಾಷಣವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು, "ಕಾಯಕ, ದಾಸೋಹ ತತ್ವಗಳ ಮೂಲಕ ಸಮಾನತೆಯನ್ನು ಸಾರುತ್ತಾ, ಸಕಲಜೀವರಾಶಿಗಳಿಗೂ ಲೇಸನ್ನು ಬಯಸಿದ ಮಹಾನ್ ಮಾನವತಾವಾದಿ ಅಣ್ಣ ಬಸವಣ್ಣನವರ ವಚನಗಳ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.