ಬೆಂಗಳೂರು :ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆರೋಪ ಮಾಡಿದವರು ಯಾವುದೇ ಸಾಕ್ಷಿ ನೀಡಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ಧವಿದೆ. ನಮ್ಮ ಪಕ್ಷ ಈ ರೀತಿಯ ಕೆಲಸ ಮಾಡುವುದಿಲ್ಲ. ಇಂತಹ ಕೆಲಸವನ್ನು ಕಾಂಗ್ರೆಸ್ ಮಾಡುತ್ತದೆ.
ಯುಪಿಎ ಸರ್ಕಾರದಲ್ಲಿ ಫೋನ್ ಕದ್ದಾಲಿಕೆಗೆ ಸಾವಿರಾರು ರೂ. ಖರ್ಚು ಮಾಡಲಾಗಿತ್ತು. ಈ ಕುರಿತು ಅಂದಿನ ಮಂತ್ರಿಗಳೇ ಹೇಳಿದ್ದರು. ಡಾಟಾ ಲೀಕ್ ಆಗಿದ್ದರೆ ಅದಕ್ಕೆ ಕೇಂದ್ರ ಸರ್ಕಾರ ಹೇಗೆ ಹೊಣೆಯಾಗುತ್ತದೆ ಎಂದು ಪ್ರಶ್ನಿಸಿದರು.
ಪ್ರತಿಪಕ್ಷಗಳ ಫೋನ್ ಕದ್ದಾಲಿಕೆ ಆರೋಪ ಸತ್ಯಕ್ಕೆ ದೂರ ವಾಟ್ಸ್ಆ್ಯಪ್‌ನಿಂದ ಕದ್ದಾಲಿಸಲು ಸಾಧ್ಯವಿಲ್ಲ ಎಂದು ಕಪಿಲ್ ಸಿಬಲ್ ಅವರೇ ಸುಪ್ರೀಂಕೋರ್ಟ್ಗೆ ಹೇಳಿದ್ದಾರೆ. ಪೆಗಾಸಿಸ್ ಸಂಸ್ಥೆ ಹೊರದೇಶಗಳಲ್ಲಿ ಈ ರೀತಿ ಚಟುವಟಿಕೆಗಳನ್ನು ನಡೆಸುತ್ತದೆ. ದೇಶದ್ರೋಹಿಗಳು ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವುದನ್ನು ಖಂಡಿಸುತ್ತೇವೆ ಎಂದರು.
ಪೆಗಾಸಿಸ್ ಮತ್ತು ಅಮ್ನೆಸ್ಟಿ ಸಂಸ್ಥೆಗಳು ನಮ್ಮ ದೇಶದ ಆಂತರಿಕ ವಿಚಾರಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್, ಎಡ ಪಕ್ಷಗಳು ಸದನ ನಡೆಯದಂತೆ ನಡೆದುಕೊಂಡಿರುವುದು ಖಂಡನೀಯ. ಯುಪಿಎ ಅವಧಿಯಲ್ಲಿ ಪ್ರತಿ ತಿಂಗಳು 9000 ಫೋನ್ ಹಾಗೂ 500 ಇ-ಮೇಲ್ ಕದ್ದಾಲಿಕೆ ನಡೆಸಿರುವ ದಾಖಲೆ ಇದೆ.
ಕೇಂದ್ರ ಸರ್ಕಾರ ಕದ್ದಾಲಿಕೆ ಮಾಡಿರುವ ಯಾವುದೇ ದಾಖಲೆ ಇಲ್ಲ. ಮಹತ್ವದ ಬಿಲ್ಗಳು ಬರುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ನಡೆದಿರುವುದು ಸರಿಯಲ್ಲ. ಕೋವಿಡ್ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಿರುವುದನ್ನು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿ ಕಾರಿದರು.