ಕರ್ನಾಟಕ

karnataka

ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ-ಪ್ರತಿಪಕ್ಷಗಳ ಜುಗಲ್ ಬಂದಿ ಇದ್ದರೆ ದೇಶಕ್ಕೆ ಶ್ರೇಯಸ್ಸು: ಹೆಚ್​ಡಿಕೆ

By

Published : Jul 17, 2022, 5:29 PM IST

ಮುಖ್ಯ ನ್ಯಾಯಮೂರ್ತಿಗಳ ಮಾತುಗಳು ಹೊಣೆಗೇಡಿತನದ ಆಡಳಿತದ ಕಣ್ತೆರೆಸಲಿ. ಸ್ವಾತಂತ್ರ್ಯ ಭಾರತದಲ್ಲಿ ನಾವು 75 ವರ್ಷ ಸಾಗಿದ್ದೇವೆ. ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಸಿ ಹೇಳಿರುವ ಮಾತುಗಳನ್ನು ಎಲ್ಲರೂ ಕೇಳಲೇಬೇಕು ಎಂದು ಹೆಚ್​ಡಿಕೆ ಸಲಹೆ ನೀಡಿದ್ದಾರೆ.

hdk
hdk

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ-ಪ್ರತಿಪಕ್ಷಗಳ ಜುಗುಲ್‌ʼಬಂದಿ ಇದ್ದರೆ ದೇಶಕ್ಕೆ ಶ್ರೇಯಸ್ಸು ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ರಮಣ ಅವರು ಜೈಪುರದ ಸಭೆಗಳಲ್ಲಿ ಪ್ರತಿಪಕ್ಷಗಳು ಮತ್ತು ವಿಚಾರಣಾಧೀನ ಕೈದಿಗಳ ಬಗ್ಗೆ ಪ್ರಸ್ತಾಪಿಸಿರುವ ಮಹತ್ವದ ಅಂಶಗಳ ಬಗ್ಗೆ ನನ್ನ ಸಹಮತ ಇದೆ. ಅದಕ್ಕಾಗಿ ನಾನು ಮುಖ್ಯ ನ್ಯಾಯಮೂರ್ತಿಗಳನ್ನು ಅಭಿನಂದಿಸುತ್ತೇನೆ ಎಂದರು.

ಹಿಂದೆ ಪ್ರತಿಪಕ್ಷಗಳು ನಕ್ಷತ್ರಕನ ಪಾತ್ರ ಪೋಷಿಸುತ್ತಿದ್ದವು. ದುರದೃಷ್ಟವಶಾತ್‌ ದೇಶದಲ್ಲಿ ಆ ಪಕ್ಷಗಳ ಸ್ಥಾನ ಕುಗ್ಗುತ್ತಿದೆ. ಚರ್ಚೆ ಇಲ್ಲದೆಯೇ ಮಸೂದೆಗಳನ್ನು ಅಂಗೀಕರಿಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಾತನ್ನು ನಾನು ಒಪ್ಪುತ್ತೇನೆ. ಆ ಬಗ್ಗೆ ಆತ್ಮಾವಲೋಕನ ಇವತ್ತಿನ ತುರ್ತು ಅಗತ್ಯ ಎಂದು ಹೆಚ್​ಡಿಕೆ ತಿಳಿಸಿದ್ದಾರೆ.

ದೇಶದಲ್ಲಿ ಪ್ರತಿಪಕ್ಷಗಳು ದುರ್ಬಲವಾಗಲು ಕಾರಣರಾರು? 8 ವರ್ಷಗಳಿಂದ ಏನಾಗುತ್ತಿದೆ? ಪ್ರಶ್ನಿಸಿದರೆ ರಾಷ್ಟ್ರದ್ರೋಹಿ ಎಂಬ ಹಣೆಪಟ್ಟಿ! ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಮರ್ಥ್ಯ ಸೇನ್‌ ಅವರಿಗೇ ಈ ಕಹಿ ಅನುಭವ ಆಗಿದೆ. ಜಗತ್ತಿನ ಸರ್ವಶ್ರೇಷ್ಠ ಆರ್ಥಿಕ ತಜ್ಞರಿಗೇ ಹೀಗಾದರೆ ಹೇಗೆ? ಪ್ರತಿಪಕ್ಷ ನಾಯಕರು ದನಿ ಎತ್ತಿದರೆ ಇಡಿ, ಸಿಬಿಐ, ಐಟಿ ಚಾಟಿ. ಸಂಸತ್ತು, ವಿಧಾನಸಭೆಗಳಲ್ಲಿ ಮೌಲಿಕ ಚರ್ಚೆ ನಡೆಯುತ್ತಿಲ್ಲ. ಮುಖ್ಯ ನ್ಯಾಯಮೂರ್ತಿಗಳ ಕಳವಳ ಸಕಾಲಿಕವಾಗಿದೆ. ಲಕ್ಷ ಕೋಟಿಗಳ ಬಜೆಟ್‌ ಸೇರಿ ಮಹತ್ವದ ಮಸೂದೆಗಳನ್ನು ಚರ್ಚೆಗೇ ಬಿಡುತ್ತಿಲ್ಲ. ಕರ್ನಾಟಕದ ವಿಧಾನಸಭೆಯೇ ಇದಕ್ಕೆ ಸಾಕ್ಷಿ. ಪ್ರತಿಯೊಂದು ಪಕ್ಷ, ಪ್ರತಿಯೊಬ್ಬ ಜನಪ್ರತಿನಿಧಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಿಚಾರಣೆಯೇ ಇಲ್ಲದೆ ಕೈದಿಗಳ ದೀರ್ಘಾವಧಿ ಬಂಧನ ಪ್ರಶ್ನಾರ್ಹ ಎಂದಿದ್ದಾರೆ ಮುಖ್ಯ ನ್ಯಾಯಮೂರ್ತಿಗಳು. ದೇಶದಲ್ಲಿ ಸೆರೆವಾಸ ಅನುಭವಿಸುತ್ತಿರುವ 6.10 ಲಕ್ಷ ಕೈದಿಗಳಲ್ಲಿ ಶೇ.80ರಷ್ಟು ವಿಚಾರಣಾಧೀನ ಕೈದಿಗಳೇ ಇದ್ದಾರೆ. ಅವರಲ್ಲಿ ನಿರಪರಾಧಿಗಳೆಷ್ಟು? ಅವರ ದುಃಸ್ಥಿತಿಗೆ ಉತ್ತರದಾಯಿಗಳು ಯಾರು?. ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ವಿಚಾರಣೆಯೇ ಇಲ್ಲದೆ ದೀರ್ಘಕಾಲ ಬಂಧನದಲ್ಲಿ ಇರಿಸುವುದೂ ಒಂದು ಶಿಕ್ಷೆಯೇ ಸರಿ. ಆತುರ, ವಿವೇಚನೆ ಇಲ್ಲದ ಬಂಧನಗಳು, ಜಾಮೀನು ಪಡೆಯುವಲ್ಲಿನ ಕಷ್ಟಗಳ ಬಗ್ಗೆಯೂ ಮುಖ್ಯ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ಮಾತುಗಳು ಹೊಣೆಗೇಡಿತನದ ಆಡಳಿತದ ಕಣ್ತೆರೆಸಲಿ. ಸ್ವಾತಂತ್ರ್ಯ ಭಾರತದಲ್ಲಿ ನಾವು 75 ವರ್ಷ ಸಾಗಿದ್ದೇವೆ. ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಸಿ ಹೇಳಿರುವ ಮಾತುಗಳನ್ನು ಎಲ್ಲರೂ ಕೇಳಲೇಬೇಕು ಎಂದು ಸಲಹೆ ನೀಡಿದ್ದಾರೆ.

(ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಒಡೆದು ಹೋಳಾಗಲು ಕುಂಬಳಕಾಯಿಯೂ ಅಲ್ಲ, ಮಡಿಕೆಯೂ ಅಲ್ಲ: ಡಿಕೆಶಿ)

ABOUT THE AUTHOR

...view details