ಬೆಂಗಳೂರು: ಕಬ್ಬು ಬೆಳೆಗಾರರು ಆತಂಕಕ್ಕೆ ಒಳಗಾಗೋದು ಬೇಡ, ಸಮಸ್ಯೆಯನ್ನು ಶೀಘ್ರ ಪರಿಹರಿಸೋದಾಗಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಭರವಸೆ ನೀಡಿದ್ದಾರೆ. ಇದ್ರ ಜೊತೆಗೆ, ಕಬ್ಬು ಬೆಳೆಗಾರರಿಗೆ ಪಾವತಿ ಬಾಕಿ ಇಟ್ಟುಕೊಂಡು ಸತಾಯಿಸುತ್ತಿದ್ದ ಎರಡು ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ವಿಕಾಸಸೌಧದಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಸಚಿವರು, ರೈತರ ಹಣ ಬಾಕಿ ಪಾವತಿ ಬಗ್ಗೆ ಬೆಳಗಾವಿಯಲ್ಲಿ ಹಾಗೂ ಬೆಂಗಳೂರಿನಲ್ಲಿ ಸಭೆ ನಡೆಸಿದ್ದೇವೆ. ಕಾರ್ಖಾನೆ ಮಾಲೀಕರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ರೈತರಿಗೆ ಬಾಕಿ ಇರುವ ಹಣ ನೀಡಲು ಸೂಚನೆ ನೀಡಲಾಗಿತ್ತು. ಈ ವರ್ಷ 42.17 ಕೋಟಿ ರೂ. ಮೊತ್ತ ಬಾಕಿ ಇತ್ತು. ಸೂಚನೆ ಹಿನ್ನೆಲೆ, ಕಾರ್ಖಾನೆಗಳು ಮೂರು ದಿನಗಳ ಒಳಗಾಗಿ 26.26 ಕೋಟಿ ರೂ. ಜಮೆ ಮಾಡಿವೆ ಎಂದು ತಿಳಿಸಿದರು.
ಬಾಕಿ ಎಷ್ಟು?:
ಒಟ್ಟು 42.17 ಕೋಟಿ ರೂ. ಬಾಕಿ ಪೈಕಿ 26. 26 ಕೋಟಿ ರೂ. ಪಾವತಿಯಾಗಿದ್ದು, 15.91 ಕೋಟಿ ರೂ. ಬಾಕಿ ಇದೆ. ಈ ಪೈಕಿ ಬಸವೇಶ್ವರ ಶುಗರ್ಸ್ 9.50 ಕೋಟಿ ರೂ., ಕೋರ್ ಗ್ರೀನ್ ಶುಗರ್ಸ್ ಕಾರ್ಖಾನೆಯಿಂದ 6.41 ಕೋಟಿ ರೂ. ಬಾಕಿ ಇದೆ. ಈ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಕಬ್ಬು ಬೆಳೆಗಾರರು ಆತಂಕಕ್ಕೆ ಒಳಗಾಗೋದು ಬೇಡ. ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡುತ್ತೇನೆ. ರೈತರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ ಸಚಿವರು, ಎಫ್ ಆರ್ ಪಿ ದರ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಬೇಕಾಗುತ್ತದೆ. ನಾನು ಸಚಿವನಾದ ಮೇಲೆ ಎರಡು ಬಾರಿ ಕೇಂದ್ರ ಸಕ್ಕರೆ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ನಾನು ಸಚಿವನಾದ ಮೇಲೆ ಮೊದಲ ಹೆಜ್ಜೆ ಇಟ್ಟಿದ್ದೇನೆ, ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇನೆ. ಸರ್ಕಾರ ನೋಟಿಸ್ ಕೊಟ್ಟ ಮೇಲೆ 5 ಕಾರ್ಖಾನೆಗಳು ಬಾಕಿಯಿದ್ದ ಹಣ ಪೂರ್ತಿ ಮಾಡಿವೆ. ಇನ್ನೂ ಸಕ್ಕರೆ ಉದ್ಯಮ ನಷ್ಟದಲ್ಲೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.