ಬೆಂಗಳೂರು: ಕೇಂದ್ರ ಸರ್ಕಾರದಿಂದ ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆದಿರುವ ಪ್ರತಿಭಟನೆ ಹಿನ್ನೆಲೆ, ಕಾಂಗ್ರೆಸ್ ಕಚೇರಿಗೆ ಆಗಮಿಸಿರುವ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತಿರುವುದು ಕಂಡುಬಂದಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿರುವ ಕಾರ್ಯಕರ್ತರು ಎಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದು ಕಾಣಿಸುತ್ತಿಲ್ಲ. ಕೆಪಿಸಿಸಿ ಕಚೇರಿಯಿಂದ ವಿವಿಧ ರಾಜ್ಯ ನಾಯಕರ ಜೊತೆ ಸೈಕಲ್ ಮೂಲಕ ಮೆರವಣಿಗೆ ತೆರಳಿ ಇಂಡಿಯನ್ ಎಕ್ಸ್ಪ್ರೆಸ್ ಬಳಿ ಇರುವ ಆದಾಯ ತೆರಿಗೆ ಇಲಾಖೆ ಕಚೇರಿವರೆಗೂ ತೆರಳಿ ಅಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ತೀರ್ಮಾನಿಸಿದ್ದರು.
ಕಾಂಗ್ರೆಸ್ ಪ್ರತಿಭಟನೆ ವೇಳೆ ಮರೆಯಾದ ಸಾಮಾಜಿಕ ಅಂತರ ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿ ಮುಂಭಾಗ ಜಮಾಯಿಸಿರುವ ನೂರಾರು ಕಾರ್ಯಕರ್ತರು ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಓಡಾಡುತ್ತಿರುವುದು ಹಾಗೂ ಪ್ರತಿಭಟನೆಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗಮಿಸಿದ ಸಂದರ್ಭ ಕಾರ್ಯಕರ್ತರ ನೂಕುನುಗ್ಗಲು ಇನ್ನಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ. ಪ್ರತಿಭಟನೆಗೆ ಮುನ್ನ, ಪ್ರತಿಭಟನೆಯ ವೇಳೆ ಹಾಗೂ ಪ್ರತಿಭಟನೆ ಮುಕ್ತಾಯದವರೆಗೂ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಒಬ್ಬರ ಮೇಲೆ ಒಬ್ಬರು ಬಿದ್ದಂತೆ ನಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಸಾಮಾಜಿಕ ಅಂತರಕ್ಕೆ ಅರ್ಥವಿಲ್ಲದಂತೆ ಮಾಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.