ಬೆಂಗಳೂರು :ರಾಜ್ಯಕ್ಕೆ ಎರಡು ರೇಕ್ ಕಲ್ಲಿದ್ದಲು ಕೊರತೆ ಮಾತ್ರ ಇದೆ. ಇನ್ನೆರಡು ದಿನದಲ್ಲಿ ತೆಲಂಗಾಣ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿ ಆ ರಾಜ್ಯದ ಗಣಿಯಿಂದ ನಮಗೆ ಮಂಜೂರಾತಿ ಸಿಕ್ಕಿರುವ ಕಲ್ಲಿದ್ದಲು ಪೂರೈಕೆಯಲ್ಲಿ ಎರಡು ರೇಕ್ ಹೆಚ್ಚಿಸಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜತೆಗಿನ ಸಭೆ ನಂತರ ಮಾತನಾಡಿದ ಅವರು, ವಿದ್ಯುತ್ ಉತ್ಪಾದನೆ, ಬೇಡಿಕೆ ಮತ್ತು ಕಲ್ಲಿದ್ದಲು ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿ ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದೇವೆ. ದೆಹಲಿಯಲ್ಲಿ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರನ್ನು ಭೇಟಿಯಾದ ನಂತರ ಎರಡು ರೇಕ್ ಹೆಚ್ಚುವರಿಯಾಗಿ ಬರುತ್ತದೆ.
98,863 ಮೆಟ್ರಿಕ್ ಟನ್ ದಾಸ್ತಾನು ಇದೆ. ನಮಗೆ ಇನ್ನೂ ಮೂರು ರೇಕ್ ಬಂದಲ್ಲಿ ಸಹಕಾರಿಯಾಗಲಿದೆ. ಅಷ್ಟು ನಮಗೆ ಅಗತ್ಯವಿದೆ. ತೆಲಂಗಾಣದ ಗಣಿಯಿಂದ ಮತ್ತೆ ಎರಡು ರೇಕ್ಗಳನ್ನು ಕೊಡುವ ಭರವಸೆ ಕೊಟ್ಟಿದ್ದಾರೆ. ಅವರಿಗೆ ಕಲ್ಲಿದ್ದಲು ಖರೀದಿಯ ಬಾಕಿ ಹಣ ಕೊಡಬೇಕಿದೆ. ಅದನ್ನ ಇನ್ನೆರಡು ದಿನದಲ್ಲಿ ಕೊಡಲಾಗುತ್ತದೆ.
ನಂತರ ತೆಲಂಗಾಣ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುತ್ತೇನೆ ಮತ್ತು ಕೇಂದ್ರ ಕಲ್ಲಿದ್ದಲು ಸಚಿವರ ಜತೆ ಮಾತುಕತೆ ನಡೆಸಿ ಹೆಚ್ಚುವರಿ 2 ರೇಕ್ ಪಡೆಯಲಾಗುತ್ತದೆ. ಉತ್ತಮ ಗುಣಮಟ್ಟದ ಕಲ್ಲಿದ್ದಲು ಮತ್ತು ಹತ್ತಿರ ಇರುವುದರಿಂದ ಮೊದಲ ಪ್ರಾಶಸ್ತ್ಯವಾಗಿ ತೆಲಂಗಾಣದ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಿಎಂ ತಿಳಿಸಿದರು.
ಎಸ್ಕಾಂ ಸಾಲ ಈಕ್ವಿಟಿ ಆಗಿ ಪರಿವರ್ತನೆ :ಎಸ್ಕಾಂಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಿಂದಿನ ಸಾಲವನ್ನು ಈಕ್ವಿಟಿ ಆಗಿ ಪರಿವರ್ತನೆ ಮಾಡುವ ಪ್ರಸ್ತಾವನೆ ನಮ್ಮ ಮುಂದಿದೆ. ಅದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ. ಎಸ್ಕಾಂಗಳನ್ನು ಕೂಡ ಆರ್ಥಿಕವಾಗಿ ಸಬಲೀಕರಣ ಮಾಡಬೇಕು.
ಯಾವ ಎಸ್ಕಾಂನಲ್ಲಾಗಲಿ ಆದಾಯ ಸಂಗ್ರಹವಾಗಲಿದೆಯೋ ಅದನ್ನು ಕಲ್ಲಿದ್ದಲಿನ ಬಾಕಿಗೆ ಕೊಡಬೇಕು. ಕ್ಯಾಪಿಟಲ್ ಇನ್ವೆಸ್ಟ್ಮೆಂಟ್ ಪ್ರತ್ಯೇಕವಾಗಿ ಕೊಡಬೇಕು. ಪದೇಪದೆ ಬಾಕಿ ಉಳಿಸಿಕೊಳ್ಳಬಾರದು ಎನ್ನುವ ಸೂಚನೆ ಕೊಟ್ಟಿದ್ದೇನೆ ಎಂದರು.
ಇಲ್ಲಿಯವರೆಗೂ ಕಲ್ಲಿದ್ದಲು ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಕಳೆದ 50 ವರ್ಷ ಇಲ್ಲದಷ್ಟು ದಾಖಲೆ ಮಳೆ ಈ ಬಾರಿಯಾಗಿದೆ. ಗಣಿಯಲ್ಲಿ ನೀರು ಹೋಗಿದ್ದರಿಂದ ಸ್ವಲ್ಪ ಸಮಸ್ಯೆ ಆಗಿದೆ. ಆದರೆ ನಮಗೆ ಆಗಬೇಕಾದ ಕಲ್ಲಿದ್ದಲು ಸರಬರಾಜಿನಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಗಿದೆ. ಕಳೆದ ಎರಡು ದಿನಗಳಿಂದ ಕಲ್ಲಿದ್ದಲು ಸರಬರಾಜು ಹೆಚ್ಚಾಗಿದೆ ಎಂದು ಅಧಿಕಾರಿಗಳನ್ನು ಸಿಎಂ ಸಮರ್ಥಿಸಿಕೊಂಡರು.