ಮೈಸೂರು :ಬೆಂಗಳೂರಿನ ಅರಮನೆ ಆವರಣದಲ್ಲಿ ಚಿತ್ರರಂಗದಿಂದ ಇಂದು(ನ.16) ಹಮ್ಮಿಕೊಂಡಿರುವ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ನುಡಿ ನಮನ ಕಾರ್ಯಕ್ರಮಕ್ಕೆ ಇಲ್ಲಿನ ಶಕ್ತಿಧಾಮದ ಮಕ್ಕಳು ಬೆಂಗಳೂರಿಗೆ ತೆರಳಿದರು.
ಮೈಸೂರಿನ ಶಕ್ತಿಧಾಮದ 150 ಮಕ್ಕಳು ಮೇಲ್ವಿಚಾರಕಿ ಸುಮನಾ ನೇತೃತ್ವದಲ್ಲಿ ಬೆಂಗಳೂರಿಗೆ ಖಾಸಗಿ ಬಸ್ನಲ್ಲಿ ತೆರಳಿದರು. ಕಾರ್ಯಕ್ರಮದಲ್ಲಿ ಅಗಲಿದ ನಟ ಪುನೀತ್ ರಾಜ್ಕುಮಾರ್ಗೆ ಮಕ್ಕಳು ಪ್ರಾರ್ಥನೆ ಸಲ್ಲಿಸಿದ್ದಾರೆ.
ಶಕ್ತಿಧಾಮ ಶಕ್ತಿಯಾಗಿದ್ದ ಪುನೀತ್ :ಮೈಸೂರಿನ ಊಟಿ ರಸ್ತೆಯ ಚಾಮುಂಡಿ ಬೆಟ್ಟದ ಪಕ್ಕದಲ್ಲಿರುವ ಶಕ್ತಿಧಾಮ ಅಶಕ್ತ ಮಹಿಳೆಯರ ಪುನರ್ವಸತಿ ಹಾಗೂ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಕೇಂದ್ರವಾಗಿದೆ. ಈ ಶಕ್ತಿಧಾಮವನ್ನು ದಿ.ಪಾರ್ವತಮ್ಮ ರಾಜ್‍ಕುಮಾರ್ ಹಾಗೂ ಇತರ ಸ್ಥಳೀಯರ ನೆರವಿನಿಂದ ಸ್ಥಾಪನೆ ಮಾಡಲಾಗಿದೆ.
ಪುನೀತ್ ರಾಜ್‍ಕುಮಾರ್ ನುಡಿನಮನ ಡಾ.ರಾಜ್ ಕುಟುಂಬವೇ ಕೇಂದ್ರದ ಜವಾಬ್ದಾರಿ ಹೊತ್ತಿದೆ. ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಧಾಮದ ಅಧ್ಯಕ್ಷರಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ತಮ್ಮ ಜನ್ಮದಿನವನ್ನು ಹಲವಾರು ಬಾರಿ ಇಲ್ಲಿಯೇ ಆಚರಿಸಿಕೊಂಡಿದ್ದರು. ಅಲ್ಲದೇ, ಆರ್ಥಿಕ ನೆರವನ್ನೂ ಒದಗಿಸಿದ್ದರು.
ಇಲ್ಲಿನ ಮಕ್ಕಳಿಗೆ ಪುನೀತ್ ಎಂದರೆ ಎಲ್ಲಿಲ್ಲದ ಪ್ರೀತಿ. ಆ ದೃಷ್ಟಿಯಿಂದ ಮಕ್ಕಳನ್ನು ಇಂದು ಬೆಂಗಳೂರಿನಲ್ಲಿ ನಡೆಯಲಿರುವ ನುಡಿ ನಮನ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮಾಡಲು ಕರೆದುಕೊಂಡು ಹೋಗಲಾಗುತ್ತಿದೆ.