ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ವ್ಯವಸ್ಥಿತ ಸಂಚು. ಕೇರಳಕ್ಕೆ ಹೋಗಿಯೂ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್.ಟಿ ನಗರ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆ ಖಂಡನೀಯ. ಇಂತಹ ಹೇಯ ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು. ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ. ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ. ಓಂ ಶಾಂತಿ ಎಂದು ಸಂತಾಪ ಸೂಚಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಕೆಲವೊಂದನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಹಿಂದಿನಿಂದ ಬಂದು ಮೋಸದಿಂದ ಕೊಲೆ ಮಾಡಿದ್ದಾರೆ. ಅವರನ್ನ ದಸ್ತಗಿರಿ ಮಾಡಿ ಉಗ್ರ ಶಿಕ್ಷೆ ವಿಧಿಸುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅಮಾಯಕ ಕೊಲೆಯಾದಾಗ ಆಕ್ರೋಶವಿರುತ್ತದೆ. ಎಲ್ಲರಿಗೂ ಶಾಂತಿ ಸಹನೆಯಿಂದ ಇರಲು ಸೂಚಿಸಿದ್ದೇನೆ. ಅದಷ್ಟು ಬೇಗ ಕೊಲೆಗಡಕರನ್ನ ಬಂಧಿಸುವಂತೆ ಗೃಹ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಘಟನೆ ನಡೆದ ಜಾಗ ಕೇರಳ ಬಾರ್ಡರ್ ಆಗಿರುವುದರಿಂದ ಆರೋಪಿಗಳು ನೆರೆ ರಾಜ್ಯಕ್ಕೂ ಹೋಗಿರಬಹುದು. ಹಾಗಾಗಿ ಕೇರಳಕ್ಕೆ ಹೋಗಿಯಾದರೂ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದೇವೆ ಎಂದರು.
ಇದನ್ನೂ ಓದಿ:ಬಿಜೆಪಿ ಯುವ ಮುಖಂಡನಿಗೆ ಮಾರಣಾಂತಿಕ ಹಲ್ಲೆ.. ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವು
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:ಜನೋತ್ಸವ ಕಾರ್ಯಕ್ರಮಕ್ಕೆ ಭ್ರಷ್ಟೋತ್ಸವ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಭ್ರಷ್ಟಾಚಾರದ ಗಂಗೋತ್ರಿ ಅಂದರೆ ಅದು ಕಾಂಗ್ರೆಸ್. ಕಾಂಗ್ರೆಸ್‌ನ ಅಧ್ಯಕ್ಷರು ಹಿಂದಿನ ಅಧ್ಯಕ್ಷರು ಭ್ರಷ್ಟಾಚಾರ ಆರೋಪದಡಿ ದಿನ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇಲ್ಲಿನ ಅಧ್ಯಕ್ಷರು ಸಹ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಜನ ಅವರನ್ನ ಯಾವ ಸ್ಥಾನದಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಆದರೆ ಅವರು ಇನ್ನೂ ಪಾಠ ಕಲಿತಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗೆ ಇಲ್ಲ. ಇವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಯಾವುದಾದರೂ ಒಂದು ವಿಶಿಷ್ಟ ಪ್ರಕರಣದ ಬಗ್ಗೆ ಡಿಟೈಲ್ಸ್ ಕೊಟ್ಟರೆ ಮುಕ್ತವಾದ ತನಿಖೆ ಮಾಡಲು ಸಿದ್ಧರಿದ್ದೇವೆ. ಸುಮ್ನೆ ಹಿಟ್ ಆ್ಯಂಡ್ ರನ್ ಮಾಡೋದಲ್ಲ. ಸಾಕಷ್ಟು ಭ್ರಷ್ಟಾಚಾರ ಅವರ ಕಾಲದಲ್ಲಿ ಆಗಿದೆ. ಮುಂದಿನ ದಿನಗಳಲ್ಲಿ ಅದೆಲ್ಲಾ ತಿಳಿಯಲಿದೆ. ಕಾಂಗ್ರೆಸ್ನಿಂದ ನಮಗೆ ಸರ್ಟಿಫಿಕೇಟ್ ಬೇಕಿಲ್ಲ. ನಮಗೆ ಜನ ಸರ್ಟಿಫಿಕೆಟ್ ಕೊಡುತ್ತಾರೆ ಎಂದರು.
ಜನರಿಗಾಗಿ ಉತ್ಸವ:ಅವರು ಸಿದ್ದರಾಮೋತ್ಸವ ಜಯಂತಿ ಮಾಡುತ್ತಿದ್ದಾರೆ. ಅದು ವ್ಯಕ್ತಿಯ ಪೂಜೆ. ಆದರೆ ನಾವು ಜನರ ಉತ್ಸವ ಮಾಡುತ್ತಿದ್ದೇವೆ. ಅವರು ವೈಯಕ್ತಿಕವಾಗಿ ವ್ಯಕ್ತಿಗತವಾಗಿ ಉತ್ಸವ ಮಾಡುತ್ತಿದ್ದಾರೆ. ನಾವು ಜನರಿಗಾಗಿ ಉತ್ಸವ ಮಾಡುತ್ತಿದ್ದೇವೆ ಎಂದರು. ಸರ್ಕಾರದ ಒಂದು ವರ್ಷದ ಸಾಧನಾ ಸಮಾವೇಶ ನಾಳೆ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದ್ದು, ಜನರಿಗೆ ಹೊಸ ಯೋಜನೆ ಘೋಷಣೆ ನಿರೀಕ್ಷೆ ಇದೆ ಎನ್ನಲಾಗ್ತಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ,ಘಟನೆ ನಡೆದ ಪ್ರದೇಶ ಕೇರಳ ಗಡಿಗೆ ಸಮೀಪದಲ್ಲಿದೆ ಮತ್ತು ಕೇರಳ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಸಾಧಿಸುವ ಮೂಲಕ ಅಪರಾಧಿಗಳನ್ನು ಹಿಡಿಯಲು ಪೊಲೀಸರು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಮಂಗಳವಾರ ರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಬೆಳ್ಳಾರೆಯಲ್ಲಿ ಅವರ ಕೋಳಿ ಅಂಗಡಿಯ ಮುಂದೆಯೇ ಕೊಂದಿದ್ದಾರೆ. ಘಟನೆಯ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿದ್ದು, ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ ಎಂದು ಹೇಳಿದರು.
ಹಿರಿಯ ಎಡಿಜಿಪಿ ಶ್ರೇಣಿಯ ಅಧಿಕಾರಿ ಮಂಗಳೂರಿಗೆ ತೆರಳಲಿದ್ದು, ತನಿಖೆಯ ಮೇಲ್ವಿಚಾರಣೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಹಂತಕರನ್ನು ಪತ್ತೆ ಹಚ್ಚಲು ಈಗಾಗಲೇ ಪೊಲೀಸ್ ತಂಡ ಕಾರ್ಯಾಚರಣೆ ಕೈಗೊಂಡಿದೆ. ಈ ಸಂದರ್ಭದಲ್ಲಿ, ಸಾರ್ವಜನಿಕರು ಶಾಂತಿಯಿಂದ ವರ್ತಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ ಎಂದು ಗೃಹ ಸಚಿವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ: ಸೆಕ್ಷನ್ 144 ಜಾರಿ, ಕೆಲವೆಡೆ ಶಾಲೆಗಳಿಗೆ ರಜೆ
ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ:ಬಿಜೆಪಿ ಯುವ ಮುಖಂಡನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭಿಕ ವರದಿಗಳು ಮತ್ತು ಕೆಲವು ಮಾಧ್ಯಮ ವರದಿಗಳು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಗಳ ನಂಟನ್ನು ಸೂಚಿಸುತ್ತವೆ. ಕೇರಳದಲ್ಲಿ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅವರನ್ನು ಪ್ರೋತ್ಸಾಹಿಸುತ್ತಿದೆ. ನಮ್ಮ ಕರ್ನಾಟಕ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.