ಬೆಂಗಳೂರು:ವಿವಿಧ ವರ್ಗದ ಬಡ ಜನರಿಗೆ ಆಹಾರದ ಕಿಟ್ ಹಾಗೂ ಆರ್ಥಿಕ ಸಹಕಾರ ನೀಡುವ ಕಾರ್ಯಕ್ಕೆ ಚಾಮರಾಜಪೇಟೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚಾಲನೆ ನೀಡಿದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆ, ಸಂಕಷ್ಟದಲ್ಲಿರುವ ಎಲ್ಲಾ ಅಸಂಘಟಿತ ಕಾರ್ಮಿಕ ವಲಯಗಳಾದ ಸವಿತ ಸಮಾಜ, ಮಂಗಳಮುಖಿಯರು, ಅಗರಬತ್ತಿ ಕಾರ್ಮಿಕರು, ವಿಶೇಷ ಚೇತನರು, ಸಂಡೆ ಬಜಾರ್ ಮ್ಯಾಕ್ಸಿ ವ್ಯಾಪಾರಸ್ಥರು, ದಿನ ಪತ್ರಿಕೆ ಹಂಚುವವರು, ಆಟೋಚಾಲಕರು, ಜೆ.ಜೆ.ಆರ್‌ನಗರ ಕೋವಿಡ್ ಕೇರ್ ಸೆಂಟರ್ ಸಿಬ್ಬಂದಿ, ಬಿಬಿಎಂಪಿ ಗುತ್ತಿಗೆ ಕಾಲೇಜಿನ ಶಿಕ್ಷಕರು/ಸಿಬ್ಬಂದಿ, ಬಿಬಿಎಂಪಿ ಗುತ್ತಿಗೆ ಹೌಸ್‌ಕೀಪಿಂಗ್ ಸಿಬ್ಬಂದಿ, ಆನಂದಪುರಂ ಕೊಳಚೆ ಪ್ರದೇಶದ ಜನರಿಗೆ ಮನೆ ಮನೆಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಮ್ಮಿಕೊಂಡಿದ್ದರು.
ಜನ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಬಯಸ್ತಾರೆ.. ಶಾಸಕ ಜಮೀರ್ ಅಹ್ಮದ್ ಖಾನ್ ಓದಿ: ಮೈಸೂರು ಹೊರತುಪಡಿಸಿ 16 ಜಿಲ್ಲೆಗಳಲ್ಲಿ Unlock: ಬಸ್ ಸಂಚಾರ ಸೇರಿ ಯಾವೆಲ್ಲಾ ಸೇವೆ ಲಭ್ಯ?
1,600 ಮನೆಗಳಿಗೆ ದಿನಸಿ ಕಿಟ್ ಹಾಗೂ ಈ ಮೇಲ್ಕಂಡ ಸುಮಾರು 2000 ಅಸಂಘಟಿತ ಕಾರ್ಮಿಕರಿಗೆ ದಿನಸಿ ಕಿಟ್, ಸ್ಟೀಮರ್, ಸ್ಯಾನಿಟೈಸರ್, ಮಾಸ್ಕ್ ಹಾಗೂ 2000 ರೂ.ಗಳ ಸಹಾಯಧನ ವಿತರಣಾ ಕಾರ್ಯಕ್ರಮ ಇದೇ ಸಂದರ್ಭ ಸಾಂಕೇತಿಕವಾಗಿ ಚಾಲನೆ ಪಡೆಯಿತು.
ಮೊದಲ ಅಲೆ ಗಿಂತ ಎರಡನೇ ಅಲೆ ಅಪಾಯಕಾರಿ :ಸಮಾರಂಭ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಜಮೀರ್ ಅಹ್ಮದ್, ನಾನು ಕಳೆದ ಬಾರಿ ಮನೆ ಮನೆಗೆ 60,000 ರೇಷನ್ ಕೀಟ್ಗಳನ್ನು ನೀಡಿದ್ದೇನೆ. ನಿತ್ಯ 30 ಸಾವಿರ ಮಂದಿಗೆ ಊಟ ಹಾಕಿದ್ದೇನೆ. ಆದರೆ, ಕಳೆದ ಬಾರಿ ಸಾಕಷ್ಟು ಮಂದಿ ರೋಗಕ್ಕೆ ಹೆದರಿ ಸಾವನ್ನಪ್ಪಿದ್ದಾರೆ. ಆದರೆ, ಈ ಬಾರಿ ನಿಜವಾದ ಕೊರೊನಾ ರಾಜ್ಯವನ್ನು ಕಾಡಿದೆ. ಕಳೆದ ಬಾರಿ ದೇಶಾದ್ಯಂತ ಲಾಕ್ಡೌನ್ ಮಾಡುವ ಅವಶ್ಯಕತೆ ಇರಲಿಲ್ಲ.
ಆದರೆ, ಈ ಬಾರಿ ಪ್ರಧಾನಿ ಲಾಕ್ಡೌನ್ ಮಾಡುವ ನಿರ್ಧಾರವನ್ನು ರಾಜ್ಯಗಳಿಗೆ ಬಿಟ್ಟು ಸುಮ್ಮನೆ ಕೂತಿದ್ದಾರೆ. ಲಾಕ್ಡೌನ್ ಮಾಡುವಂತೆ ಘೋಷಿಸಿದರೆ ಜನರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಅರಿವು ಅವರಿಗೆ ಗೊತ್ತಿದ್ದು, ಸುಮ್ಮನೆ ಕುಳಿತಿದ್ದಾರೆ. ಎರಡನೇ ಅಲೆ ಇಷ್ಟೊಂದು ಅಪಾಯ ಉಂಟು ಮಾಡುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಮಿತಿಯವರು ನೀಡಿದ ಸಲಹೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಜಮೀರ್ ಅಹಮದ್ ಆರೋಪಿಸಿದರು.
ಸಾಕಷ್ಟು ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಖಾಸಗಿ ಆಸ್ಪತ್ರೆಯಲ್ಲಿ ತಮ್ಮವರನ್ನು ದಾಖಲಿಸಿ ದುಬಾರಿ ಬಿಲ್ ಭರಿಸಲಾಗದೆ ತತ್ತರಿಸಿದ್ದಾರೆ. ಸಾಕಷ್ಟು ಮಂದಿ ತಮ್ಮವರ ಶವವನ್ನು ಪಡೆಯಲು ಪೂರ್ತಿ ಹಣ ಪಾವತಿಸಲಾಗದೇ ನಮ್ಮ ಸಹಾಯ ಕೇಳಿ ಬಂದಿದ್ದಾರೆ. ಇಂಥ ಸಹಾಯವನ್ನು ನಿಜವಾಗಿಯೂ ಸರ್ಕಾರ ಮಾಡಬೇಕಿತ್ತು. ಸೂಕ್ತ ರೀತಿಯಲ್ಲಿ ಪರಿಹಾರ ನೀಡಿ ಜನರ ಸಹಾಯಕ್ಕೆ ಧಾವಿಸಿಬೇಕಿತ್ತು ಎಂದರು.
ಜೆಡಿಎಸ್ ಹೋಂ ಕ್ವಾರಂಟೈನ್ :ಸರ್ಕಾರ ಸಮರ್ಪಕವಾಗಿ ಜನರ ಸಹಾಯಕ್ಕೆ ಧಾವಿಸುತ್ತಿಲ್ಲ. ಪ್ರತಿಪಕ್ಷ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಬೇಕಿದ್ದ ಜೆಡಿಎಸ್ ನಾಯಕರು ಹೋಂ ಕ್ವಾರಂಟೈನ್ ಆಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ನಾನು ಮೊದಲಿನಿಂದಲೂ ಹೋಗೋ ಬಾರೋ ಅಂತಲೇ ಮಾತನಾಡಿಕೊಳ್ಳುತ್ತಾ ಬಂದಿದ್ದೇವೆ. ಇದೀಗ ಮತ್ತೆ ಅದು ವಿವಾದ ಆಗುವುದು ಬೇಡ. ಹೀಗಾಗಿ, ಕುಮಾರಣ್ಣ ಅಂತ ಕರೆಯುತ್ತೇನೆ ಎಂದರು.
ನಾನು ಎಲ್ಲಾ ಸಹವಾಸವನ್ನು ಬಿಟ್ಟು ಕಳೆದ ಆರು ತಿಂಗಳಿಂದ ತೋಟದಮನೆ ಸೇರಿಕೊಂಡಿದ್ದೇನೆ ಎಂದು ಕುಮಾರಣ್ಣ ಹೇಳಿದ್ದಾರೆ. ಸ್ವಾಮಿ ನೀವು ಎರಡು ಬಾರಿ ರಾಜ್ಯದ ಸಿಎಂ ಆಗಿದ್ದವರು. ಇಂತಹ ಸಂದರ್ಭದಲ್ಲಿ ತಾವು ಜನರ ಸೇವೆಗೆ ಧಾವಿಸುವುದನ್ನು ಬಿಟ್ಟು, ತೋಟದ ಮನೆಗೆ ಹೋಗಿ ಕುಳಿತಿದ್ದೇನೆ ಎಂದು ಯಾವ ಬಾಯಲ್ಲಿ ಹೇಳುತ್ತೀರಿ. ನಿಜವಾದ ನಾಯಕರು ನಮ್ಮ ಸಿದ್ದರಾಮಯ್ಯ ಎಂದು ಬಣ್ಣಿಸಿದರು.
ಜನ ಸಿದ್ದರಾಮಯ್ಯರನ್ನು ಬಯಸುತ್ತಾರೆ :ಕನಿಷ್ಠ ವಾರಕ್ಕೊಮ್ಮೆಯಾದರೂ ಚಾಮರಾಜಪೇಟೆ ಕ್ಷೇತ್ರಕ್ಕೆ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ. ಬೇರೆಯವರನ್ನು ಕರೆಯಬೇಕು ಎಂದರೆ ಕರೆಯುತ್ತೇನೆ. ಆದರೆ, ಜನ ಬೇರೆಯವರನ್ನು ಕರೆಯುವುದು ಬೇಡ ಎನ್ನುತ್ತಿದ್ದಾರೆ. ಯಾರೇ ನಾಯಕರು ಕರೆದರೂ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುವುದಿಲ್ಲ. ಬಡವರು ಕಷ್ಟದಲ್ಲಿದ್ದಾರೆ ಎಂದರೆ ಕೂಡಲೇ ಧಾವಿಸುವ ಇಂತಹ ನಾಯಕರು ನಮಗೆ ಬೇಕು ಎಂದು ಹೇಳಿದರು.