ಬೆಂಗಳೂರು: ವೆಚ್ಚ ಕಡಿತ ಮತ್ತು ಹುದ್ದೆ ಕಡಿತವನ್ನು ವಿರೋಧಿಸಿ ನಾಳೆ ಸಚಿವಾಲಯ ನೌಕರರ ಸಂಘ ಸಚಿವಾಲಯ 'ಬಂದ್' ಗೆ ಕರೆ ನೀಡಿದೆ. ಸರ್ಕಾರದ ನೌಕರರ ವಿರೋಧಿ ಧೋರಣೆ ವಿರೋಧಿಸಿ ನಾಳೆ ವಿಧಾನಸೌಧ, ವಿಕಾಸಸೌಧ ಸಚಿವಾಲಯದ ಅಧಿಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಕಚೇರಿಗೆ ರಜೆ ಹಾಕುವ ಮೂಲಕ ಗೈರು ಹಾಜರಾಗಿ ವಿಧಾನಸೌಧ, ವಿಕಾಸಸೌಧ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.
ಆಡಳಿತ ಸುಧಾರಣೆ ಮತ್ತು ಆರ್ಥಿಕ ಮಿತವ್ಯಯದ ನೆಪವೊಡ್ಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಜನಸ್ಪಂದನ ಕೋಶ) ಶಾಖೆಯನ್ನು ರದ್ದುಗೊಳಿಸಿದೆ. ಕಾನೂನು ಕೋಶ ಶಾಖೆಯಲ್ಲಿನ ಅಧೀನ ಕಾರ್ಯದರ್ಶಿ ಹುದ್ದೆಗಳನ್ನು ರದ್ದುಪಡಿಸುವ ಕ್ರಮಕ್ಕೆ ಮುಂದಾಗಿದೆ. ವಿವಿಧ ಶಾಖೆಗಳನ್ನು ಸ್ಥಳಾಂತರಿಸುವ ಮೂಲಕ ಹುದ್ದೆಗಳನ್ನು ಕಡಿತಗೊಳಿಸುತ್ತಿದೆ.
ಯಾವುದೇ ಸರ್ಕಾರದ ತೀರ್ಮಾನ, ಶಿಫಾರಸು ಇಲ್ಲದಿದ್ದರೂ ಕೆಲವು ಇಲಾಖೆಗಳ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ/ಅಪರ ಮುಖ್ಯ ಕಾರ್ಯದರ್ಶಿಯವರೇ ಸಚಿವಾಲಯ ಕೈಪಿಡಿಗೆ ವಿರುದ್ಧವಾಗಿ ಇಲಾಖೆಯ ಕಾರ್ಯನಿರ್ವಹಣಾ ವ್ಯವಸ್ಥೆಯನ್ನೇ ಬದಲಾಯಿಸುತ್ತಿರುವ ಕ್ರಮದ ವಿರುದ್ಧ ನೌಕರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.