ಬೆಂಗಳೂರು:ಗೋಹತ್ಯೆ ನಿಷೇಧ ಕಾಯ್ದೆ ಪರಿಷತ್ನಲ್ಲಿ ಮಂಡನೆಯಾಗುವ ಮೊದಲೇ ಕಲಾಪ ಮುಂದೂಡಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಗೋಹತ್ಯೆ ನಡೆಯಲು ಬಿಡುವುದಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹೇಳಿದರು.
ಗೋಮಾತೆಯ ಮೂಕ ರೋದನೆ ತಡೆಯಲು ತಂದ ವಿಧೇಯಕವನ್ನು ಕಾಂಗ್ರೆಸ್ ನಿನ್ನೆ ಪರಿಷತ್ತಿನಲ್ಲಿ ಚರ್ಚೆಗೆ ತರದೇ ಪರಿಷತ್ತಿನ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದು ಖಂಡನೀಯ. ತಾಯಿಯ ಹಾಲಿನ ಋಣ ಹೇಗೆ ತೀರಿಸಲು ಆಗುವುದಿಲ್ಲವೋ ಅದೇ ರೀತಿ ಗೋಮಾತೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಹಾಲು ಕುಡಿದ ಪ್ರತಿಯೊಬ್ಬ ವ್ಯಕ್ತಿಯೂ ಗೋಮಾತೆಯ ರಕ್ಷಣೆಗೆ ನಿಲ್ಲಬೇಕು. ಕಾಂಗ್ರೆಸ್ ನಿನ್ನೆ ನಡೆದುಕೊಂಡ ರೀತಿ ಗೋಮಾತೆಗೆ ಮಾಡಿದ ದ್ರೋಹ ಎಂದು ಮಾಧ್ಯಮ ಹೇಳಿಕೆ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
2010ರಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವಿಧೇಯಕವನ್ನು ಮಂಡಿಸಿ ಎರಡೂ ಸದನದಲ್ಲಿ ಅಂಗೀಕಾರ ಪಡೆದಿದ್ದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ನೋಟಿಸ್ ನೀಡದೆ ತರಾತುರಿಯುಲ್ಲಿ ಹಿಂಪಡೆದಿದ್ದು, ಹಳೆಯ ಕಾಯ್ದೆಯನ್ನೇ ಮುಂದುವರೆಸಿತು. ಗೋವುಗಳ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿ ಇಲ್ಲದಿರುವುದು ಈ ಮೂಲಕ ತಿಳಿಯುತ್ತದೆ ಎಂದು ಟೀಕಿಸಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಗೋಶಾಲೆಗಳ ಸ್ಥಾಪನೆ, ಗೋ ಸೇವಾ ಆಯೋಗದ ಸ್ಥಾಪನೆ, ಪಶು ಸಂಜೀವಿನಿ ಸೇವೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಯೋಚನೆಯಿದೆ. ಈ ಉದ್ದೇಶದಿಂದ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ, ಎಲ್ಲ ವಿವರಗಳನ್ನು ಪಡೆದುಕೊಂಡಿದ್ದೇನೆ. ಈ ಎರಡು ರಾಜ್ಯಗಳಲ್ಲಿ ಉತ್ತಮ ರೀತಿಯಲ್ಲಿ ಜಾನುವಾರುಗಳ ಪಾಲನೆ ಮತ್ತು ಸಂರಕ್ಷಣೆಯಾಗುತ್ತಿದೆ. ಮತ್ತು ಇಲ್ಲಿ ಹಾಲಿನ ಉತ್ಪಾದನೆ ಸಹ ಹೆಚ್ಚಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 11.50 ಲಕ್ಷ ಮತ್ತು ಗುಜರಾತ್ನಲ್ಲಿ 5 ಲಕ್ಷಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ. ಈ ಎರಡೂ ರಾಜ್ಯಗಳಲ್ಲಿ ಸರ್ಕಾರದ ಹಲವಾರು ಯೋಜನೆಗಳನ್ನು ಗೋಪಾಲನೆ ಮತ್ತು ಸಂರಕ್ಷಣೆಗೆ ಅನುಕೂಲಕರವಾಗುವ ತರಹ ಸಂಯೋಜಿಸಲಾಗಿದೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಜಾರಿಗೆ ತರುವ ಆಲೋಚನೆಯಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇವೆ. ಈ ಕಾಯ್ದೆ 19 ರಾಜ್ಯಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಕಾಂಗ್ರೆಸ್ ಆಡಳಿತ ಇರುವ ರಾಜ್ಯದಲ್ಲಿ ಸಹ ಇದು ಜಾರಿಯಲ್ಲಿದೆ ಎಂದಿದ್ದಾರೆ.
ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಹೆಚ್ಚುವರಿ ಕಾರ್ಯಸೂಚಿ ಬಗ್ಗೆ ಮೊದಲೇ ಸೂಚನೆ ನೀಡಿದ್ದರು. ಕಾಂಗ್ರೆಸ್ ಗೋವಿನ ಬಗ್ಗೆ ಕಾಳಜಿ ತೊರದೆ ವಿಧೇಯಕವನ್ನು ವಿರೋಧಿಸಿರುವುದು ಬೇಸರ ತಂದಿದೆ. ಕಾಂಗ್ರೆಸ್ ನಾಯಕರು ಗೋಹತ್ಯೆಯನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಅವರಿಗೆ ಮೂಕ ಪ್ರಾಣಿಗಳ ರಕ್ಷಣೆ ಮಾಡುವ ಮನಸ್ಸಿಲ್ಲ. ಗೋಮಾತೆಯ ಶಾಪ ತಟ್ಟಿಯೇ ತಟ್ಟುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.