ಬೆಂಗಳೂರು:ಕಾಂಗ್ರೆಸ್ ನಾಯಕರು ಕೊರೊನಾ ಮಾರ್ಗಸೂಚಿಗಳನ್ನು ಪದೇಪದೇ ಉಲ್ಲಂಘಿಸುತ್ತಿದ್ದಾರೆ. ಇವರಿಗೆ ಸಾಮಾಜಿಕ ಕಳಕಳಿಗಿಂತ ಪ್ರಚಾರದ ಗೀಳು ಜಾಸ್ತಿಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಕಳಕಳಿಗಿಂತ ಪ್ರಚಾರದ ಗೀಳು ಜಾಸ್ತಿಯಾಗಿದೆ..ಕೈ ನಾಯಕರ ವಿರುದ್ಧ ಸುಧಾಕರ್ ವಾಗ್ದಾಳಿ..! ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ, ಸಾಮಾಜಿಕ ಅಂತರವನ್ನು ಮರೆತು ಕಾಂಗ್ರೆಸ್ ಮುಖಂಡರು ಜಾತ್ರೆಯಂತೆ ರಾಜ್ಯಪಾಲರಿಗೆ ದೂರು ನೀಡಲು ಹೋಗಿರುವುದು ಅವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ. ಇವರಿಗೆ ಸಾಮಾಜಿಕ ಕಳಕಳಿಗಿಂತ ಪ್ರಚಾರದ ಗೀಳು ಜಾಸ್ತಿ. ತಾವು ಇರುವ ಕತ್ತಲೆಯನ್ನು ಅರಿಯದವರು, ಬೆಳಕಿಗಾಗಿ ಎಂದೂ ಹುಡುಕುವುದಿಲ್ಲ ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸುವಲ್ಲಿ ರಾಜ್ಯದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು ಮುಂಚೂಣಿಯಲ್ಲಿವೆ. ರಾಜ್ಯಾದ್ಯಂತ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯವಿರುವ ಸುಮಾರು 10,000 ಬೆಡ್ಗಳಲ್ಲಿ 5,000 ಬೆಡ್ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಕೋವಿಡ್ ಸಂಕಷ್ಟದಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಲವಾರು ರಾಜ್ಯಗಳು ವೈದ್ಯರ ವೇತನ ಕಡಿತಗೊಳಿಸಿರುವ ಸಂದರ್ಭದಲ್ಲಿ, 7ನೇ ವೇತನ ಆಯೋಗ ಅನ್ವಯ ವೈದ್ಯಕೀಯ ಬೋಧಕ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ಇನ್ನು, ಹೆಚ್ಚು ಕೋವಿಡ್ ಟೆಸ್ಟ್ ಮಾಡಿದರಷ್ಟೇ ಕೊರೊನಾ ನಿಯಂತ್ರಣ ಸುಲಭವಾಗುತ್ತದೆ. ರಾಜ್ಯದಲ್ಲಿ ಪ್ರತಿದಿನ 30-40 ಸಾವಿರ ಟೆಸ್ಟ್ ಮಾಡಲಾಗುತ್ತಿದೆ. ಕೆಲವರು ತಪ್ಪು ವಿಳಾಸ, ತಪ್ಪು ಮೊಬೈಲ್ ನಂಬರ್ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಕಡ್ಡಾಯವಾಗಿ ಆಧಾರ್, ಐಡಿ ಕಾರ್ಡ್ ತೋರಿಸಿ ಓಟಿಪಿ ಬಂದ ಮೇಲೆ ಟೆಸ್ಟ್ ಮಾಡಲು ಸೂಚನೆ ನೀಡಿದ್ದೇನೆ. ಕೋವಿಡ್ ನಿಯಂತ್ರಣಾ ಕಾರ್ಯಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಒದಗಿಸುವಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮಹತ್ವದ ಪಾತ್ರ ವಹಿಸಿದೆ. ಸುಮಾರು 2,000 ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಸೋಂಕಿತರ ಚಿಕಿತ್ಸೆಗೆ ಮತ್ತು 2,000 ಎಂಬಿಬಿಎಸ್, ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.