ಕರ್ನಾಟಕ

karnataka

ETV Bharat / city

ವಿಧಾನಸಭೆ ಕಲಾಪದ ಹೈಲೈಟ್ಸ್​​​​ಗಳೇನು?: ಮಂಡನೆಯಾದ ಮಸೂದೆಗಳಾವುವು?

ಕೆಲವು ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಹಂಪ್​ಗಳನ್ನು ಹಾಕಲಾಗಿದೆ. ಹಂಪ್ ಹಾಕುವ ಮತ್ತು ತೆಗೆಯುವ ನಿರ್ಧಾರ ಪಿಡಬ್ಲುಡಿ ಅಧಿಕಾರಿಗಳ ಜವಾಬ್ದಾರಿಯಲ್ಲವೇ?. ನಿಮ್ಮ ಅಧಿಕಾರಿಗಳನ್ನು ಈ ಸದನ ಮುಗಿಯುವ ಒಳಗೆ ಸಸ್ಪೆಂಡ್ ಮಾಡಿ ಎಂದು ರಮೇಶ್​ ಕುಮಾರ್ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.

legislative-assembly-session-highlights
ವಿಧಾನಸಭೆ ಕಲಾಪದ ಹೈಲೈಟ್ಸ್​​​​ಗಳೇನು?: ಮಂಡನೆಯಾದ ಮಸೂದೆಗಳಾವುವು?

By

Published : Sep 21, 2021, 4:44 AM IST

ಬೆಂಗಳೂರು : ಪ್ರಶ್ನೋತ್ತರ ಸಮಯದ ವೇಳೆ ವಸತಿ ಯೋಜನೆ ಸಂಬಂಧ ಚರ್ಚೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ‌ ಮಧ್ಯೆ ಜಟಾಪಟಿ, ಬೆಲೆ ಏರಿಕೆ ಬಗ್ಗೆ ಸರ್ಕಾರದಿಂದ ಉತ್ತರ ನೀಡುತ್ತಿದ್ದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ- ಸಿದ್ದರಾಮಯ್ಯ ಅವರ ಆರೋಪ, ಪ್ರತ್ಯಾರೋಪ, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ, ಮಾತಿನ ಚಕಮಕಿ ನಡೆಯಿತು. ‌ಇದರ ಜೊತೆಗೆ ಹಲವು ವಿಧೇಯಕಗಳ ಮಂಡನೆ, ಕೆಲವು ಅಂಗೀಕಾರ ವಿಧಾನಸಭೆಯಲ್ಲಿ ದೊರೆಯಿತು. ಇವು ಇಂದಿನ ಕಲಾಪದಲ್ಲಿ ಹೈಲೈಟ್ಸ್​​​ಗಳು.

ಕ್ರಿಮಿನಲ್ ಲೂಟ್ ಕಾಂಗ್ರೆಸ್ ಲೂಟ್ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ಬೆಲೆ ಏರಿಕೆ ಮೇಲಿನ ಚರ್ಚೆಗೆ ಉತ್ತರಿಸಿ ಸಿಎಂ, ಬೆಲೆ ಏರಿಕೆ ಮೇಲಿನ ಚರ್ಚೆ ಇದೇ ಮೊದಲಲ್ಲ, ಈ ಹಿಂದೆಯೂ ಚರ್ಚೆ ಆಗಿದೆ. ಸಂಸತ್ತಿನಲ್ಲೂ ತೀಕ್ಷ್ಣವಾಗಿ ಚರ್ಚೆ ಆಗಿದೆ. ಬೆಲೆ ಏರಿಕೆ 70ರ ದಶಕದಿಂದಲೂ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಕ್ರಿಮಿನಲ್ ಲೂಟ್ ಪದವನ್ನು ಬಳಸಿದ್ದರು‌. ನಿಮ್ಮ ಕಾಲದಲ್ಲಿ ಶೇಕಡಾ 60 ಬೆಲೆ ಏರಿಕೆಯಾಗಿದೆ. ಎನ್​ಡಿಎ ಆಡಳಿತದಲ್ಲಿ ಶೇ.30 ಬೆಲೆ ಏರಿಕೆ ಕಂಡಿದೆ. ಇದು ಕ್ರಿಮಿನಲ್‌ ಲೂಟ್ ಅಲ್ವಾ ಎಂದು ಪ್ರಶ್ನಿಸಿದರು.

ರೈತರಿಗೆ ಎಂಎಸ್‌ಪಿ ದರ ನೀಡಲಾಗಿದೆ ಎಂದು ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ರೈತರಿಗೆ ಎಲ್ಲಿ ಬೆಂಬಲ ಕೊಟ್ಟಿದ್ದೀರಾ?. ನೀವು ಎಂಎಸ್‌ಪಿ ಕೊಟ್ಟಿದ್ರೇ ಯಾಕೆ ರೈತರು ಹೋರಾಟ ಮಾಡ್ತಿದ್ರು? ಎಂದು ಪ್ರಶ್ನಿಸಿದರು. ರೈತರು ಹೋರಾಟ ಮಾಡಿದ್ದು ಸ್ಪಾನ್ಸರ್ಸ್. ಅದು ಸ್ಪಾನ್ಸರ್ಸ್ ಚಳುವಳಿ ಎಂದು ಸಿಎಂ ಟೀಕಿಸಿದರು.

ಸಿಎಂ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸ್ಪಾನ್ಸರ್ಸ್ ಚಳುವಳಿ ಎನ್ನುವ ಮೂಲಕ ರೈತರಿಗೆ ಅವಮಾನ ಮಾಡ್ತಿದ್ದೀರಾ ಎಂದು ಕಾಂಗ್ರೆಸ್ ಸದಸ್ಯರ ಆಕ್ರೋಶ ಹೊರ ಹಾಕಿದರು.

ನಮ್ಮ ನರೇಂದ್ರ ಮೋದಿ ಸರ್ಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದಾರೆ. ಆಗ ರೈತರು ಏಕೆ ಚಳವಳಿ ಮಾಡ್ತಾ ಇದ್ದಾರೆ, ದೆಹಲಿಯಲ್ಲಿ ಏಕೆ ರೈತ ಚಳವಳಿ ಆಗ್ತಿದೆ ಎಂದು ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದರು. ಹಾಗಾದ್ರೆ ರೈತರು ಸುಮ್ ಸುಮ್ನೆ ಚಳವಳಿ ಮಾಡ್ತಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ರಾಜಕೀಯ ಪ್ರೇರಿತವಾಗಿದ್ರೆ ಅದು ಸ್ಪಾನ್ಸರ್ ಚಳವಳಿ. ಪಂಜಾಬ್ ರೈತರ ಚಳವಳಿ, ಎಂಎಸ್​​ಪಿ ರಾಜಕಾರಣ ಎಂದು ಆರೋಪಿಸಿದರು.

ರೈತರ ಚಳವಳಿ ಸ್ಪಾನ್ಸರ್ ಅಂತಾ ಸಿಎಂ ಹೇಳಿದ್ದಾರೆ, ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದೆಯಾ? ಇದು ವಿದೇಶಿ ಸ್ಪಾನ್ಸರ್ ಶಿಪ್ಪೋ?. ಯಾವ್ದೂ ಹೇಳಿ?. ಸ್ಪಾನ್ಸರ್ ಶಿಪ್ ಯಾವುದು ಹೇಳಿ ಎಂದು ರಮೇಶ್ ಕುಮಾರ್ ಪ್ರಶ್ನಿಸಿದರು.

ರಮೇಶ್ ಕುಮಾರ್ ಬಹಳ ಅನುಭವಿ, ಎರಡು ಕಡೆಗೂ ಮಾತಾಡುವ ಶಕ್ತಿ ಇದೆ, ಈ ಹಿಂದೆಯೂ ಚಳವಳಿ ಆಯ್ತು. ಆಗಲೂ ವಿದೇಶಿ ಕೈಗಳ ಶಕ್ತಿ ಅಂತಾ ಇಂದಿರಾಗಾಂಧಿ ಕಾಲದಲ್ಲಿ ಹೇಳ್ತಿದ್ರು. ಈಗ ಆ ಮಾತನ್ನೂ ನಾನು ಹೇಳಲ್ಲ. ಆದ್ರೆ ಫಾರಿನ್ ಏಜೆಂಟ್ಸ್, ಎಂಎಸ್​​ಪಿ ಏಜೆಂಟ್ ಸ್ಪಾನ್ಸರ್ ಮಾಡ್ತಿದೆ ಎಂದು ತಿರುಗೇಟು ನೀಡಿದರು. ಪಂಜಾಬ್ ರೈತರು ಯಾರ ಕಪಿಮುಷ್ಟಿಯಲ್ಲಿದ್ದಾರೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ನಾನು ಸತ್ಯ ಹೇಳಲು ಹಿಂದೆ ಮುಂದೆ ನೋಡಲ್ಲ. ಕೃಷಿ ಸಮ್ಮಾನ್ ಯೋಜನೆ, ಆಯುಷ್ಮನ್ ಭಾರತ ಯೋಜನೆ, ನೇರವಾಗಿ ಬಡವರಿಗೆ ಮುಟ್ಟುತ್ತದೆ ಎಂದರು.

ಜನಾರ್ಧನ ಹೋಟೆಲ್ ಇಡ್ಲಿ, ವಡಾ ರೇಟ್ ಚರ್ಚೆ:ಬೆಲೆ ಏರಿಕೆ ಹೆಚ್ಚಾಗಿದೆ ಅಂತ ಪ್ರಸ್ತಾಪವಾಗಿದೆ. ಹೌದು ಬೆಲೆ ಹೆಚ್ಚಳವಾಗಿದೆ, ನಾವು ಒಪ್ಪಿಕೊಳ್ಳುತ್ತೇವೆ. ಕೇವಲ ಪೆಟ್ರೋಲ್, ಡಿಸೇಲ್ ನಿಂದ ಬೆಲೆ ಹೆಚ್ಚಾಗಿಲ್ಲ. ಅನೇಕ ಕಾರಣಗಳಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದರು.

ಜನಾರ್ಧನ ಹೋಟೆಲ್ ದೋಸೆ ಬೆಲೆ ಜಾಸ್ತಿಯಾಗಿದೆ ಅಂತಾರೆ. ನಾನು ಅಧಿಕೃತವಾಗಿ ದೋಸೆ, ಇಡ್ಲಿ ತರಿಸಿದ್ದೇನೆ. ನಾನು ಇಡ್ಲಿ, ದೋಸೆ ಪ್ರಸ್ತಾಪ ಮಾಡಿದ್ದು ನಾನಲ್ಲ. ಸಿದ್ದರಾಮಯ್ಯ ಅವರು ಪ್ರಸ್ತಾಪ ಮಾಡಿದ್ದರು. ಎರಡು ಇಡ್ಲಿಗೆ ಮುವತ್ತೆಂಟು ರೂಪಾಯಿ ಆಗಿದೆ. ನಿಮ್ಮ ಕಾಲದಿಂದ ಇವಾಗ ನಾಲ್ಕು ರೂಪಾಯಿ ಜಾಸ್ತಿಯಾಗಿದೆ. ಇದಕ್ಕೆಲ್ಲಾ ಪೆಟ್ರೋಲ್ ಬೆಲೆ ಹೆಚ್ಚಾಗಿದ್ದು ಕಾರಣವಾ? ಎಂದು ವಿರೋಧ ಪಕ್ಷಗಳಿಗೆ ತಿವಿದರು.

ಜನಾರ್ಧನ್ ಹೋಟೆಲ್ ದೋಸೆ ರೇಟ್ ಡಬಲ್‌ ಆಗಿದೆ ಅಂದಿದ್ದೀರ. ನಿಮಗೆ ನೀಡಿದ ಮಾಹಿತಿ ಬಗ್ಗೆ ಪರಿಸೀಲಿಸಿ. ಅಲ್ಲಿಂದ ಅಧಿಕೃತವಾಗಿ ಮಾಹಿತಿ ತರಿಸಿದ್ದೇನೆ. ಎರಡು ಇಡ್ಲಿಗೆ 2017ರಲ್ಲಿ ರೂ.35 ಇತ್ತು. 2019ರಲ್ಲಿ ರೂ.36, 2021ರಲ್ಲಿ ರೂ.38 ರೂ. ಇದೆ. ನಿಮ್ಮ ಕಾಲದಲ್ಲಿ ರೂ.80 ಇದ್ದ ದೋಸೆ ಬೆಲೆ ರೂ. 90 ಆಗಿದೆ. ನೀವು ಕೊಟ್ಟಿರುವ ಮಾಹಿತಿ ಸಮಂಜಸವಲ್ಲ ಎಂದು ಹೇಳುತ್ತೇನೆ ಎಂದು ತಿರುಗೇಟು ನೀಡಿದರು.ಬೆಲೆ ಏರಿಕೆ ಆಗ್ತಿದೆ, ಎಲ್ಲ ಮಾರಾಟ ಮಾಡಿಬಿಡ್ತಾರೆ ಅಂತಾ ಮಾತಾಡಿದ್ದೀರಿ. ಆಸ್ತಿ ನಗದೀಕರಣ ಮಾಡೋದು ಅಂದ್ರೆ ಮಾರಾಟ ಅಲ್ಲ, ಅದು ಮೌಲ್ಯವರ್ಧನೆ ಮಾಡುವುದಾಗಿದೆ‌ ಎಂದರು.

ಬಾಂಬೆ- ಪೂನಾ ಹೈವೇ ನಗರೀಕರಣ ಮಾಡಿ ಆ ಕಾಲದಲ್ಲೇ 80 ಸಾವಿರ ಕೋಟಿ ತೆಗೆದುಕೊಂಡಿದ್ದು ಯಾರು?. ಈ ಹಿಂದೆಯೂ ನಗದೀಕರಣ ನಡೆದಿದೆ, ಇದೇನು ಹೊಸದಲ್ಲ. ನಿಮ್ಮ ಕಾಲದಲ್ಲಿ ಅದನ್ನು ಆರಂಭಿಸಲಾಗಿತ್ತು. ನಾವು ಆಗ ಅದನ್ನು ವಿರೋಧಿಸಿಲ್ಲ ಎಂದರು.

ಸದನದಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ- ಎಚ್.ಡಿ.ಕುಮಾರಸ್ವಾಮಿ ಮಧ್ಯೆ ಜಟಾಪಟಿ :ಪ್ರಶ್ನೋತ್ತರ ವೇಳೆ ವಸತಿ ಯೋಜನೆ ಸಂಬಂಧ ಚರ್ಚೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ‌ ಮಧ್ಯೆ ಜಟಾಪಟಿ ಉಂಟಾದ ಘಟನೆ ನಡೆಯಿತು.

ಚರ್ಚೆ ವೇಳೆ ಸದನದಲ್ಲಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ಕುಮಾರಸ್ವಾಮಿಯವರೇ, ನೀವು ಸದನದಲ್ಲಿ ಹೇಳಿದ್ದನ್ನು ಕೇಳಿದ್ದೇನೆ. ವಸತಿ ಯೋಜನೆಗೆ ಹಣ ಕೊಟ್ಟಿಲ್ಲ ನಾನು ಕೊಟ್ಟಿದ್ದೇನೆ ಎಂದಿದ್ದೀರಿ‌. ಆಗ ಇದ್ದಿದ್ದು ನಿಮ್ಮ ಸರಕಾರ ಅಲ್ಲ. ಸಮ್ಮಿಶ್ರ ಸರಕಾರ. ನೀವು ಕೊಟ್ಟಿದ್ದಲ್ಲ. ಸಮ್ಮಿಶ್ರ ಸರಕಾರ ಕೊಟ್ಟಿದ್ದು ಎಂದು ಟಾಂಗ್ ನೀಡಿದರು.

ಅನ್ನಭಾಗ್ಯಕ್ಕೂ ನಾನೇ ಹಣ ಕೊಟ್ಟೆ ಅಂದಿದ್ದೀರಿ. ಒಂದೊಮ್ಮೆ ನಾನು ಹಣ ಕೊಟ್ಟಿಲ್ಲ ಅಂದರೆ ಪೂರಕ ಅಂದಾಜು ಯಾಕಿರೋದು.? ಪೂರಕ ಅಂದಾಜಿನಲ್ಲಿ ಹಣ ಕೊಡೋದಕ್ಕೆ ಅವಕಾಶ ಇದೆ. ಯಾವುದೇ ಸರಕಾರ ಬಂದರೂ ಹಿಂದಿನ ಸರಕಾರದ ಯೋಜನೆ ಮುಂದುವರಿಸಬೇಕು. ಅದು ಸರಕಾರದ ಜವಾಬ್ದಾರಿಯೂ ಆಗಿರಬೇಕು. ಸದನಕ್ಕೆ ಸುಮ್ಮನೆ ಸುಳ್ಳು ಮಾಹಿತಿ ಕೊಡಬೇಡಿ. ಮಾಜಿ ಸಿಎಂ ವಿರುದ್ಧ ಸಿದ್ಧರಾಮಯ್ಯ ಟಾಂಗ್ ನೀಡಿದರು.

ಸಿದ್ಧರಾಮಯ್ಯ ಮಾತಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ವಸತಿ ಸಮಸ್ಯೆ ಬಗ್ಗೆ ಎಲ್ಲಾ ಚರ್ಚೆ ಆಗಲಿ ಅಂತ ನಾನು ಮಾತಾಡಿದ್ದೇನೆ. ಯಾವುದೇ ದುರುದ್ದೇಶದಿಂದ ನಾನು ಮಾತಾಡಿರಲಿಲ್ಲ. ನನಗೂ ಗೊತ್ತಿದೆ - ಯಾವುದೇ ಸರಕಾರ ಬಂದರೂ ಹಿಂದಿನದು ಜಾರಿಯಾಗಬೇಕು.ವಸತಿ ಯೋಜನೆಯಲ್ಲಿ ಸಮಸ್ಯೆಯಾಗಿರೋದನ್ನು ಹೇಳಿದ್ದೇನೆ ಎಂದರು.

ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯಾವ ಸರಕಾರದ ಅವಧಿಯಲ್ಲಿ ಏನೇನಾಗಿದೆ ಅಂತ ದಾಖಲೆ ಇಡಿ. ಕಟ್ಟಿದ ಮನೆ ಎಷ್ಟು?. ಎಷ್ಟು ಕೊರತೆಯಾಗಿದೆ ಅಂತ ಸದನಕ್ಕೆ ದಾಖಲೆ ಇಡಿ. ಕುಮಾರಸ್ವಾಮಿ ಅವರೇ ನಿಮ್ಮ ಬಳಿ ಇರುವ ದಾಖಲೆ ಬಹಿರಂಗಪಡಿಸಿ. ನನ್ನ ಸರಕಾರದ ಅವಧಿಯಲ್ಲಿ ಆಗಿರೋ ಕೆಲಸ, ಸಮ್ಮಿಶ್ರ ಸರಕಾರದ ಅವಧಿಯ ಕೆಲಸ ಬಹಿರಂಗ ಮಾಡಿ ಎಂದು ಗುರುವಾರ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ್ದ ಟೀಕೆಗೆ ತಿರುಗೇಟು ನೀಡಿದರು.

ಸಿದ್ಧರಾಮಯ್ಯ ಟೀಕೆಗೆ ಎದ್ದುನಿಂತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೈತ್ರಿ ಸರ್ಕಾರದ ವೇಳೆ ನಾನು ಹಲವು ಸಭೆ ನಡೆಸಿದ್ದೇವೆ. ಪ್ರಗತಿ ಪರಿಶೀಲನೆ ಮಾಡಿದ್ದೆ. ನಾನು ಸಿಎಂ ಆಗಿದ್ದಾಗ ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ವಸತಿ ಯೋಜನೆಗಳಿಗೆ ಬೇಕಾದ ಹಣ 29000 ಕೋಟಿ ರೂ. ಆದರೆ 3,000 ಕೋಟಿ ಮಾತ್ರ ಮೀಸಲಿಟ್ಟಿದ್ದರು. ಅದನ್ನು ನಾನು ಪ್ರಸ್ತಾಪಿಸಿದ್ದೇನೆ. ಇದು ವಾಸ್ತವ ವಿಚಾರ. ಸದನದ ದಾರಿ ತಪ್ಪಿಸಬೇಡಿ. ಆರ್ಥಿಕ‌ ಇಲಾಖೆಯಿಂದ ವಾಸ್ತವಾಂಶ ಪಡೆಯಿರಿ. ಇಲ್ಲಿ ಯಾರದ್ದೋ ತೇಜೋವಧೆ ಮಾಡುವ ಉದ್ದೇಶ ಇಲ್ಲ. ಹಿಂದಿನ ಸರ್ಕಾರಗಳು ಮಾಡಿದ ಬದ್ಧತೆಯನ್ನು ಪ್ರತಿ ಸರ್ಕಾರಗಳು ಈಡೇರಿಸುವುದು ಜವಾಬ್ದಾರಿ. ವಾಸ್ತವಾಂಶವನ್ನು ಸದನದ‌ ಮುಂದೆ ಇಡಬೇಕು ಎಂದು ತಿರುಗೇಟು ನೀಡಿದರು.

ಹೊಸ ಸರ್ಕಾರ ಬಂದ ಬಳಿಕ ಮೂರು ವರ್ಷದಲ್ಲಿ ಮನೆ ಹಂಚಿಕೆ ಬಗ್ಗೆ ಅಸಮಾಧಾನ ಇದೆ. ವಸತಿ ಇಲಾಖೆಯ ಅಧಿಕಾರಿಗಳ ಸಭೆ ಮಾಡಿ ದಾಖಲೆ ಸದನಕ್ಕೆ ಇಡಿ ಎಂದು
ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಸಲಹೆ ನೀಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ವಸತಿ ಸಚಿವ ವಿ.ಸೋಮಣ್ಣ, ವಸತಿ ಯೋಜನೆಯ ಎಲ್ಲಾ ಸಮಸ್ಯೆಗಳು ನನ್ನ ಗಮನದಲ್ಲಿದೆ. ಸದನದಲ್ಲಿ ವಿಸ್ತ್ರತವಾದ ವಿವರ ಕೊಡುತ್ತೇನೆ ಎಂದರು.

ಶಾಸಕರ ಅಧಿಕಾರ ಮೊಟಕುಗೊಳಿಸಬಹುದಾ?:ಚನ್ನಪಟ್ಟಣದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಸಭೆ ನಡೆಸುತ್ತಿರುವ ಬಗ್ಗೆ ಆಕ್ಷೇಪಿಸಿ ಮಾಜಿ ಸಿಎಂ ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸೆ.15ರಂದು ಸಂಸದ ಸಭೆ ನಡೆಸುತ್ತಾರೆ. ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ತಹಶೀಲ್ದಾರ್, ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಭೆಗೆ ಹಾಜರಾಗಲು ಡಿಸಿ ಸೂಚಿಸುತ್ತಾರೆ. ಶಾಸಕರ ಅನುಪಸ್ಥಿತಿಯಲ್ಲಿ ಸಂಸದರಿಗೆ ಅವಕಾಶ ಇದೆಯಾ?. ನಮ್ಮ‌ ಗಮನಕ್ಕೆ ಬರದೇ ಕಂದಾಯ ಇನ್ಸ್ ಪೆಕ್ಟರ್ ನ್ನು, ಪಿಡಿಒಗಳನ್ನು ಕರೆದು, ತಾಲೂಕಿಗೆ ಸಂಬಂಧಿಸಿದ ಸಭೆ ನಡೆಸಲು ಅವಕಾಶ‌ ಇದೆ.

ಇ- ಖಾತೆ, ರೈಲ್ವೇ ಯೋಜನೆ ಬಗ್ಗೆ ಅವರು ಏನು ಸಭೆ ನಡೆಸುತ್ತಾರೆ?. ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಯಾವ ರೈಲು ಬಿಡುತ್ತಾರೆ. ಅಲ್ಲಿ ಯಾವ ರೈಲು ಬರುತ್ತೆ?.ಅಥವಾ ಸಿಎಂ ಏನಾದರೂ ರೈಲು ಯೋಜನೆ ಬಗ್ಗೆ ಭರವಸೆ ನೀಡಿದ್ದಾರಾ ಎಂದು ಗೊತ್ತಿಲ್ಲ ಎಂದು ಟಾಂಗ್ ನೀಡಿದರು.

ಡಿಸಿ ಕಚೇರಿಯಲ್ಲಿ ಸಭೆ ನಡೆಯುತ್ತಿದೆ. ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುತ್ತಿದೆ. ಕಂದಾಯ ಅಧಿಕಾರಿಗಳು, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಶಾಸಕರ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ. ಸರ್ಕಾರ ಏನಾದರೂ ಈ ಬಗ್ಗೆ ಅಧಿಕಾರ ಕೊಟ್ಟಿದೆಯ? ಎಂದು ಹೆಚ್​ಡಿಕೆ‌ ಪ್ರಶ್ನಿಸಿದರು.

ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ:ಕೆಡಿಪಿ ಸಭೆ ಜಿಲ್ಲಾ ಉಸ್ತುವಾರಿ ನೇತೃತ್ವದಲ್ಲಿ ನಡೆಸಬೇಕು. ವ್ಯಕ್ತಿಗತವಾಗಿ ಸಭೆ ಕರೆಯಲು ಅವಕಾಶ ಇಲ್ಲ.‌ ಈ ಬಗ್ಗೆ ಸಾಕಷ್ಟು ಬಾರಿ ಚರ್ಚೆಗಳಾಗಿವೆ. ಆದರೂ ಅದು ಮರುಕಳಿಸುತ್ತಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

ದಿಶಾ ಕಮಿಟಿ ಸಭೆ ನಡೆಸಲು ಅವಕಾಶ ಇದೆ. ಆದರೆ ಅದರಲ್ಲೇ ಮೂರು ನಾಲ್ಕು ಭಾಗ ಮಾಡಿ ಸಭೆ ನಡೆಸಲಾಗುತ್ತಿದೆ. ಇದು ವಾಸ್ತವ ಸ್ಥಿತಿ. ದಿಶಾ ಸಮಿತಿ ಸಭೆಯನ್ನು ಶಾಸಕ ಸಮ್ಮುಖದಲ್ಲಿ ಮಾಡಬೇಕು. ಈ ವ್ಯವಸ್ಥೆ ಸರಿಯಾಗಬೇಕು. ಪದೇ ಪದೆ ಸಭೆ ನಡೆಸುವುದರಿಂದ ಅಧಿಕಾರಿಗಳಿಗೆ ಹಿಂಸೆ ಆಗುತ್ತಿದೆ. ದಿನಾ ಸಭೆಗಳೇ ನಡೆಯುತ್ತಿವೆ. ಈ ಸಂಬಂಧ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಐದು ಜನರ ತಲೆ ತೆಗೆಯಬೇಕಾಗಿದೆ, ಅನುಮತಿ ಕೊಡ್ತೀರಾ?: ನನಗೆ ಐದು ಜನರ ತಲೆ ತೆಗೆಯಬೇಕಾಗಿದೆ. ಅನುಮತಿ ಕೊಡ್ತೀರಾ? ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ವಿಚಿತ್ರ ಪ್ರಸ್ತಾಪ ಇಟ್ಟರು.

ಪ್ರಶ್ನೋತ್ತರ ಅವಧಿಯಲ್ಲಿ ಅವೈಜ್ಞಾನಿಕ ರಸ್ತೆ ಹಂಪ್​​ಗಳ ಬಗ್ಗೆ ವಿಷಯ ಪ್ರಸ್ತಾಪಿಸಿತ್ತಾ, ಅವೈಜ್ಞಾನಿಕವಾಗಿ ಹಂಪ್​ಗಳನ್ನು ಹಾಕಲಾಗಿದೆ. ಹಂಪ್ ಹಾಕುವ ಮತ್ತು ತೆಗೆಯುವ ನಿರ್ಧಾರ ಪಿಡಬ್ಲುಡಿ ಅಧಿಕಾರಿಗಳ ಜವಾಬ್ದಾರಿಯಲ್ಲವೇ?. ರಸ್ತೆಗಳಿಗೆ ಪಿಡಬ್ಲುಡಿ ಅಧಿಕಾರಿಗಳು ಹೋಗಿ ನೋಡಿದ್ದಾರಾ?. ನಿಮ್ಮ ಅಧಿಕಾರಿಗಳನ್ನು ಈ ಸದನ ಮುಗಿಯುವ ಒಳಗೆ ಸಸ್ಪೆಂಡ್ ಮಾಡಿ. ಸುಮ್ಮನೆ ಅವೈಜ್ಞಾನಿಕವಾಗಿ ಹಂಪ್ ಗಳನ್ನು ಹಾಕಬೇಡಿ ಎಂದು ಆಗ್ರಹಿಸಿದರು.

ಮಧ್ಯೆ ಪ್ರವೇಶ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಲವು ಸಂದರ್ಭಗಳಲ್ಲಿ ಸ್ಥಳಿಯರ ಬೇಡಿಕೆ ಮೇಲೆ ಹಂಪ್ ಹಾಕ್ತಾರೆ. ಅದಕ್ಕೆ ಸ್ಥಳೀಯ ಶಾಸಕರು, ಸಂಸದರು ಹೇಳಿಯೇ ಹಂಪ್ ಹಾಕಿದ್ದಾರೆ. ಇದನ್ನು ನಾನು ಕೂಡ ಗಮನಿಸಿದ್ದೇನೆ. ಜನಪ್ರತಿನಿಧಿಗಳು ಹೇಳಿದ್ದರಿಂದ ಹಂಪ್ ಹಾಕಲು ಅನುಮತಿ ಕೊಡಲಾಗಿದೆ ಎಂದರು.

ಸ್ಪೀಕರ್ ಮಾತಿನಿಂದ ಬೇಸರಗೊಂಡ ರಮೇಶ್ ಕುಮಾರ್, ಹಾಗಾದರೆ ನಾನು ಹೇಳಿದ್ರೆ ಕೇಳಿ ಬಿಡ್ತೀರಾ?. ನನಗೆ ಐದು ಜನರ ತಲೆ ತೆಗೆಯಬೇಕು ಅಂದರೆ ಅನುಮತಿ ಕೊಡ್ತೀರಾ? ಎಂದು ಸಿಟ್ಟಿಗೆದ್ದರು.

ರಮೇಶ್ ಕುಮಾರ್ ಮಾತಿಗೆ ಇತರ ಶಾಸಕರು ಸಹಮತ ವ್ಯಕ್ತಪಡಿಸಿದರು. ಎಲ್ಲಾ ಕಡೆ ಇಂತಹ ವ್ಯವಸ್ಥೆ ಇರೋದ್ರಿಂದ ಅವೈಜ್ಞಾನಿಕ ಹಂಪ್ ತೆಗೆಯಬೇಕು. ತಕ್ಷಣವೇ ಸಚಿವರು ಮಧ್ಯ ಪ್ರವೇಶ ಮಾಡುವಂತೆ ಎಲ್ಲಾ ಪಕ್ಷಗಳ ಶಾಸಕರು ಆಗ್ರಹಿಸಿದರು.

ದೇವನಹಳ್ಳಿ ವಿಮಾನನಿಲ್ದಾಣಕ್ಕೆ ಒಳ್ಳೆಯ ರಸ್ತೆ ಮಾಡಿ, ಬ್ರೇಕ್ ಹಾಕಿದ್ರೆ ಹೇಗೇ? ಇಂಟರ್ ನ್ಯಾಷನಲ್ ಪ್ಲೈಟ್ ಹಿಡಿಯೋನು ಏನು ಮಾಡಬೇಕು?. ಇಲಾಖಾ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಲು ಆಗ್ರಹಿಸಿದರು. ಡಿಸಿ, ಎಸ್ ಪಿ ಗಳ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳೋದಾಗಿ ಸಚಿವ ಸಿ.ಸಿ. ಪಾಟೀಲ್ ಭರವಸೆ ನೀಡಿದರು.

ಈ ವೇಳೆ ಸಚಿವರ ಉತ್ತರಕ್ಕೆ ಸಿಟ್ಟಾದ ರಮೇಶ್ ಕುಮಾರ್​​​ರಿಂದ ಪ್ರಶ್ನೆ ಹಿಂಪಡೆಯುವ ಬೆದರಿಕೆ ಒಡ್ಡಿದರು. ಇಂತಹ ಪ್ರಶ್ನೆ ಇನ್ಮುಂದೆ ಕೇಳೋದಿಲ್ಲ. ಇಡೀ ನಡಾವಳಿ ಹಿಂದಕ್ಕೆ ಪಡೆಯುತ್ತೇನೆ. ಅಧಿಕಾರಿಗಳನ್ನು ಅಮಾನತು ಮಾಡಲು ನಿಮಗೇನು ತೊಂದರೆ?. ಅಧಿಕಾರಿಗಳು ನಿಮ್ಮತ್ತೆ ಮಕ್ಕಳೇ ಎಂದು ರಮೇಶ್ ಕುಮಾರ್ ಕೇಳಿದರು.

ಹಲವು ವಿಧೇಯಕ ಮಂಡನೆ, ಕೆಲವು ವಿಧೇಯಕಕ್ಕೆ ಅಂಗೀಕಾರ : ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳ ತೆರವು ತಡೆಗಟ್ಟುವ ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ ) ವಿಧೇಯಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಇಂದು ಮಂಡಿಸಿದರು. ಮೈಸೂರು ಜಿಲ್ಲೆ ನಂಜನಗೂಡು ದೇವಾಲಯ ತೆರವಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಸಚಿವ ಸಂಪುಟ ಸಭೆಯಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಮಾಡದಿರಲು‌ ನಿರ್ಣಯ ಸರ್ಕಾರ ನಿರ್ಣಯ ಮಾಡಿತ್ತು. ಎಲ್ಲಾ ಧರ್ಮಗಳ ಪ್ರಾರ್ಥನಾ ಮಂದಿರಗಳ ರಕ್ಷಣೆ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಧಾರ್ಮಿಕ ಕೇಂದ್ರಗಳ ತೆರವಿನಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ವಿಧೇಯಕದ ಮೂಲಕ ಹೊಸ ನಿಯಾಮವಳಿ ರೂಪಿಸಲು ಸರ್ಕಾರ ನಿರ್ಧಾರ ಮಾಡಿದೆ.

ನ್ಯಾಯಾಲಯದ ತೀರ್ಪು ಇದ್ದರೂ ಸರ್ಕಾರದ ನಿಯಮಗಳಿಗೆ ಒಳಪಟ್ಟಂತೆ ಇದ್ದರೆ ಆ ಧಾರ್ಮಿಕ ಸಂಸ್ಥೆಗಳನ್ನ ತೆರವು ಮಾಡುವಂತಿಲ್ಲ. ಸರ್ಕಾರದ ನಿಯಮಾವಳಿಯಿಂದ ಹೊರಗೆ ಇದ್ದರೆ ಆ ಧಾರ್ಮಿಕ‌ ಸಂಸ್ಥೆಗಳ ಕಟ್ಟಡಗಳು ಮಾತ್ರ ತೆರವು ಮಾಡಲಾಗುತ್ತದೆ. ಈ ವಿಧೇಯಕದ ಬಗ್ಗೆ ಸದನದಲ್ಲಿ ಚರ್ಚೆಗೆ ಬರಲಿದ್ದು, ಮಸೂದೆ ಅಂಗೀಕಾರಗೊಂಡ ಬಳಿಕ ವಾರದೊಳಗೆ ಹೊಸ ನಿಯಮಾವಳಿಗಳನ್ನು ತರುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿದ ಬಳಿಕ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಧಾರ್ಮಿಕ ಕಟ್ಟಡಗಳನ್ನು ಹೊಸದಾಗಿಯೂ ನಿರ್ಮಿಸಲು ಅವಕಾಶ ಇಲ್ಲ. ಸರ್ಕಾರಕ್ಕೆ ಸೇರಿದ ಜಾಗದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮುಂದೆ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಇನ್ನೂ ಎರಡು ವಿಧೇಯಕಗಳ ಮಂಡನೆ : 2021ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಮಂಡಿಸಿದರು. ಅದೇ ರೀತಿ 2021 ನೇ ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು.

ವಿಧೇಯಕಗಳ ಅಂಗೀಕಾರ :ಕಂದಾಯ ಸಚಿವ ಆರ್. ಅಶೋಕ್ ಅವರು ಮಂಡಿಸಿದ್ದ 2021 ನೇ ಸಾಲಿನ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು. ಮುದ್ರಾಂಕ ಶುಲ್ಕ ಕಡಿತಕ್ಕೆ ತಿದ್ದುಪಡಿ ವಿಧೇಯಕ ಮಂಡಿಸಿದ್ದು, ಶೇ.5ರಷ್ಟು ಇರುವ ಮುದ್ರಾಂಕ ಶುಲ್ಕ ಶೇ.3ಕ್ಕೆ ಇಳಿಕೆಯಾಗಲಿದೆ. 45 ಲಕ್ಷಕ್ಕಿಂತ ಕಡಿಮೆ ಬೆಲೆ ಬಾಳುವ ಮನೆ ರಿಜಿಸ್ಟ್ರೇಷನ್ ಗೆ ಇನ್ಮುಂದೆ ಶೇ.3ರಷ್ಟು ಮಾತ್ರ ಮುದ್ರಾಂಕ ಶುಲ್ಕ ಕಟ್ಟಬೇಕಾಗುತ್ತದೆ. ಈ ಮೊದಲು ಶೇ. 5ರಷ್ಟು ಮುದ್ರಕ ಶುಲ್ಕ ಇತ್ತು.

ಈ ವೇಳೆ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್, ನಿವೇಶನಗಳಿಗೂ ಮುದ್ರಾಂಕ ಶುಲ್ಕ ಕಡಿಮೆ ಮಾಡಿ ಎಂದು ಒತ್ತಾಯಿಸಿದರು. ಬೆಂಗಳೂರಿನ ನಾಗರಿಕರಿಗೆ ಮಾತ್ರ ಇದು ಸಹಾಯವಾಗುತ್ತದೆ. ರಾಜ್ಯದ ಇತರೆ ನಗರಗಳಲ್ಲಿ ಯಾವ ರೀತಿ ಸಹಾಯ ಆಗುತ್ತದೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸದಸ್ಯ ಡಿ.ಕೆ. ಶಿವಕುಮಾರ್ ಮಾತನಾಡಿ, ಕೇವಲ ಬಿಲ್ಡರ್​​ಗಳಿಗೆ ಮಾತ್ರ ಸಹಾಯ ಮಾಡಲು ಈ ವಿಧೇಯಕ ತಂದಿದ್ದೀರಾ?. ನಿಜವಾಗಲು ಬಡವರಿಗೆ ಸಹಾಯ ಮಾಡುವುದಾದರೆ , ನಿವೇಶನಗಳಿಗೂ ರಿಯಾಯಿತಿ ನೀಡಿ ಎಂದರು. ಶೇ.3ರ ಬದಲು ಶೇ.1ರಷ್ಟು ಮುದ್ರಾಂಕ ಶುಲ್ಕ ಮಾಡಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಲಹೆ ಮಾಡಿದರು.

ಅದೇ ರೀತಿ 2021ನೇ ಸಾಲಿನ ಕರ್ನಾಟಕ ಸೌಹಾರ್ದ ಸಹಕಾರಿ( ತಿದ್ದುಪಡಿ )ವಿಧೇಯಕಕ್ಕೂ ಅಂಗೀಕಾರ ದೊರೆಯಿತು.

ABOUT THE AUTHOR

...view details