ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯಿಂದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆಯೋ, ಇಲ್ಲವೋ ಎಂಬ ಬಗ್ಗೆ ಹಿಂಬರಹದಲ್ಲಿ ಮಾಹಿತಿ ನೀಡಲು ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ (ವ್ಯವಸ್ಥಾಪಕಿ) ವಸಂತಕುಮಾರಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಲಂಚಕ್ಕೆ ಬೇಡಿಕೆಯಿಟ್ಟ ವಿಶೇಷ ಭೂ ಸ್ವಾಧೀನಾಧಿಕಾರಿ ಎಸಿಬಿ ವಶಕ್ಕೆ
ವಿಶೇಷ ಭೂ ಸ್ವಾಧೀನಾಧಿಕಾರಿಯೊಬ್ಬರು 25 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಜರಾಜೇಶ್ವರಿ ನಗರದ ನಿವಾಸಿಯೊಬ್ಬರು ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿ ತನಗೆ ಸೇರಿದ ಐದು ಎಕರೆ ಜಮೀನನ್ನು ಕರ್ನಾಟಕ ಗೃಹ ಮಂಡಳಿ ಭೂ ಸ್ವಾಧೀನಪಡಿಸಿಕೊಂಡಿದೆಯೋ, ಇಲ್ಲವೊ? ಎಂಬುದರ ಬಗ್ಗೆ ಹಿಂಬರಹದಲ್ಲಿ ಮಾಹಿತಿ ಕೇಳಿ ವಿವಿ ಟವರ್‌ನಲ್ಲಿರುವ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ನೀಡಲು ಭೂ ಸ್ವಾಧೀನಾಧಿಕಾರಿಗಳ ಕಚೇರಿ ವ್ಯವಸ್ಥಾಪಕಿಯಾದ ವಸಂತಕುಮಾರಿ 30 ಸಾವಿರ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ಮುಂಗಡವಾಗಿ ಅರ್ಜಿದಾರರಿಂದ 5 ಸಾವಿರ ಹಣ ಪಡೆದು, ಉಳಿದ ಹಣ ನೀಡುವಂತೆ ತಿಳಿಸಿದ್ದರು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಕಚೇರಿಯಲ್ಲಿ ಗುರುವಾರ ವಂಸತಕುಮಾರಿ ಅರ್ಜಿದಾರರಿಂದ 25 ಸಾವಿರ ರೂ. ಹಣ ಪಡೆಯವಾಗ ಎಸಿಬಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಸಂತಕುಮಾರಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.