ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ತಮ್ಮ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿರುವುದಾಗಿ ಡಿ.ಕೆ.ಶಿವಕುಮಾರ್ ಅವರೇ ಈ ಬಗ್ಗೆ ಖುದ್ದು ಮಾಹಿತಿ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೂ ಅಂಟಿದ ಕೊರೊನಾ: ಆಸ್ಪತ್ರೆಗೆ ದಾಖಲು
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿಕೆಶಿ, ನನಗೆ ಜ್ವರ ಬಂದಿತ್ತು, ಹೀಗಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೆ. ಇದೀಗ ವರದಿ ಪಾಸಿಟಿವ್ ಬಂದಿದೆ. ನಾನು ಆರೋಗ್ಯವಾಗಿದ್ದೇನೆ, ಆದರೆ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಿಮ್ಮ ಹಾರೈಕೆ-ಆಶೀರ್ವಾದಗಳಿಂದಾಗಿ ಶೀಘ್ರದಲ್ಲೇ ಗುಣಮುಖನಾಗಿ ಬರುವೆ. ನನ್ನ ಸಂಪರ್ಕಕ್ಕೆ ಬಂದಿದ್ದವರೆಲ್ಲರೂ ಎಚ್ಚರಿಕೆ ವಹಿಸಿ ಎಂದು ಮನವಿ ಮಾಡುತ್ತೇನೆಂದು ತಿಳಿಸಿದ್ದಾರೆ.
ಈ ಹಿಂದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಕೋವಿಡ್ಗೆ ಒಳಗಾಗಿ, ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಇದೀಗ ಕಾಂಗ್ರೆಸ್ ಅಧ್ಯಕ್ಷರಿಗೂ ಕೋವಿಡ್ ಮಹಾಮಾರಿ ಅಂಟಿಕೊಂಡಿದೆ.