ಬೆಂಗಳೂರು :ನೋವೆಲ್ ಕೊರೊನಾ ವೈರಸ್ ಎಂಟ್ರಿ ಕೊಟ್ಟು ವರ್ಷವೇ ಕಳೆದಿದೆ. ಇತ್ತ ವೈರಸ್ ವಿರುದ್ಧ ಹೋರಾಡಲು ಕೋವಿಡ್ ಲಸಿಕೆ ಕೂಡ ಬಂದಿದೆ. ಮೊದಲ ಹಂತವಾಗಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಹಾಗೆಯೇ ಹಿರಿಯ ನಾಗರಿಕರಿಗೂ ಲಸಿಕೆ ನೀಡಲಾಗುತ್ತಿದೆ. ಇದೀಗ ಜನರಲ್ಲಿ ಕೋವಿಡ್ ಲಸಿಕೆ ಕುರಿತು ಗೊಂದಲಗಳು ಶುರುವಾಗಿವೆ.
ಅದರಲ್ಲೂ ಕಿಡ್ನಿ ವೈಫಲ್ಯ, ಹೃದಯ ಸಮಸ್ಯೆ, ಸ್ಟೆಂಟ್ ಅಳವಡಿಕೆ ಸೇರಿದಂತೆ ನಾನಾ ಅನಾರೋಗ್ಯ ಸಮಸ್ಯೆವುಳ್ಳವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದಾ ಬೇಡ್ವಾ ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ, ಬಹಳಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಈ ಸಂಬಂಧ ಲಸಿಕೆ ಕುರಿತಾದ ಅನುಮಾನ ಕುರಿತು ಯುರಾಲಜಿ ತಜ್ಞರಾದ ಡಾ. ಸೂರ್ಯರಾಜು ಸಂದೇಹ ಬಗೆಹರಿಸಿದ್ದಾರೆ.
ಇವತ್ತಿನ ದಿನ ಕಿಡ್ನಿ ವೈಫಲ್ಯ ಸಮಸ್ಯೆ ಇರುವವರು ಹೆಚ್ಚು ಜನರಿದ್ದಾರೆ. ಈಗೀನ ಕೋವಿಡ್ ಪರಿಸ್ಥಿತಿಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕೋ ಬೇಡ್ವೋ ಎಂಬ ಗೊಂದಲ ಇದೆ. ಕೋವಿಡ್ ಸೋಂಕಿನ ಪ್ರಕರಣದಲ್ಲಿ ಏರಿಳಿತ ಕಂಡು ಬರುತ್ತಿದೆ.
ಕೊರೊನಾ ಹೋಗಲಾಡಿಸಬೇಕು ಅಂದರೆ ಲಸಿಕೆಯನ್ನ ಎಲ್ಲರೂ ಹಾಕಿಸಿಕೊಳ್ಳಬೇಕು. ಕಿಡ್ನಿ ಸಮಸ್ಯೆ, ವೈಫಲ್ಯ ಇರುವ ರೋಗಿಗಳು ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಇಂತಹ ರೋಗಿಗಳು ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ.