ಕರ್ನಾಟಕ

karnataka

By

Published : May 27, 2022, 2:17 PM IST

ETV Bharat / city

ಸಚಿವಾಲಯ ನೌಕಕರ ಬಂದ್ : 90% ಸಿಬ್ಬಂದಿ ಕೆಲಸಕ್ಕೆ ಗೈರು, ಬಿಗಿ ಪೊಲೀಸ್ ಭದ್ರತೆ

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಚಿವಾಲಯ ನೌಕರರ ಸಂಘ ಕರೆ ನೀಡಿದ್ದ ಬಂದ್ ಬಹುತೇಕ ಯಶಸ್ವಿಯಾಗಿದೆ. ಬಂದ್ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಎಂಎಸ್‌ ಬಿಲ್ಡಿಂಗ್​ನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ..

Ministry
Ministry

ಬೆಂಗಳೂರು: ಆಡಳಿತ ಸುಧಾರಣೆ ಮತ್ತು ಆರ್ಥಿಕ ಮಿತವ್ಯಯ ಕಾಪಾಡುವ ನಿಟ್ಟಿನಲ್ಲಿ ಸಚಿವಾಲಯದ ಹಲವು ಹುದ್ದೆಗಳನ್ನು ಕಡಿತಗೊಳಿಸಿದ ಕ್ರಮ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಚಿವಾಲಯ ನೌಕರರ ಸಂಘ ಕರೆ ನೀಡಿದ್ದ ಬಂದ್ ಬಹುತೇಕ ಯಶಸ್ವಿಯಾಗಿದೆ. ಅಧಿಕಾರಿಗಳನ್ನು ಹೊರತುಪಡಿಸಿ 85% ರಿಂದ 90%ರಷ್ಟು ಸಿಬ್ಬಂದಿ ಇಂದು ಕಚೇರಿಗೆ ಹಾಜರಾಗದೆ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಈ ಬಂದ್‌ನ ಗಂಭೀರವಾಗಿ ಪರಿಗಣಿಸಿದೆ. ಸಚಿವಾಲಯದ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಸೂಚಿಸಿ ಸುತ್ತೋಲೆ ಹೊರಡಿಸಿದ್ದರು. ಸಚಿವಾಲಯದ ನೌಕರರ ಸಂಘದವರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಂದ್‌ಗೆ ಕರೆ ನೀಡಿರುವುದು ಕಾನೂನು ಬಾಹಿರವಾಗಿದೆ.

ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸಚಿವಾಲಯದ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಕೆಲಸಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಮೇಲಧಿಕಾರಿಗಳ ಅನುಮತಿ ಪಡೆಯದೆ ಗೈರು ಹಾಜರಾದರೆ ಅದನ್ನು ಲೆಕ್ಕಕ್ಕಿಲ್ಲದ ಅವಧಿ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಇದ್ಯಾವುದಕ್ಕೂ ಕ್ಯಾರೇ ಎನ್ನದ ಸಚಿವಾಲಯ ಸಿಬ್ಬಂದಿ, ತಮ್ಮ ತಮ್ಮ ಕಚೇರಿಗೆ ಹಾಜರಾಗದೆ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧಕ್ಕೆ ಪೊಲೀಸ್ ಭದ್ರತೆ ಹೆಚ್ಚಳ :ಸಚಿವಾಲಯದ ಸಿಬ್ಬಂದಿ ಬಂದ್ ಹಿನ್ನೆಲೆ ವಿಧಾನಸೌಧ, ವಿಕಾಸಸೌಧ ಹಾಗೂ ಎಂಎಸ್‌ ಬಿಲ್ಡಿಂಗ್‌ನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಎಂ ಎಸ್ ಬಿಲ್ಡಿಂಗ್​ನ ಪ್ರತಿ ಬ್ಲಾಕ್​ನ ದ್ವಾರದ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಅದೇ ರೀತಿ ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಹೆಚ್ಚಿನ ಪೊಲೀಸರನ್ನು ಹಾಗೂ ಕೆಎಸ್​ಆರ್​ಪಿ ತುಕಡಿಯನ್ನು ನಿಯೋಜಿಸಲಾಗಿದೆ.

'ಈಟಿವಿ ಭಾರತ' ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ, ನಮ್ಮ ಸಿಬ್ಬಂದಿ ಸ್ವಯಂ ಪ್ರೇರಿತವಾಗಿ ಬಂದ್​ನಲ್ಲಿ ಭಾಗಿಯಾಗಿದ್ದು, ಬಹುತೇಕ ಯಶಸ್ವಿಯಾಗಿದೆ. ಸಚಿವಾಲಯದ ಎಲ್ಲಾ ನೌಕರರಿಗೆ ಧನ್ಯವಾದಗಳು. ಬಂದ್​ನಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ನಿಜ. ಆದರೆ, ಇದು ತಾತ್ಕಾಲಿಕ ಎಂದರು.

ಈಗಾಗಲೇ ಮೂರು ಹಂತದ ಹೋರಾಟ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿಗಳು ನಮ್ಮನ್ನು ಕರೆದು ಮಾತನಾಡಿಸಿಲ್ಲ. ಈ ಕಾರಣಕ್ಕಾಗಿ ಸರ್ಕಾರದ ಗಮನ ಸೆಳೆಯಲು ಅನಿವಾರ್ಯವಾಗಿ ಬಂದ್ ಮಾಡಿದ್ದೇವೆ. ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತಿಲ್ಲ. ಮುಖ್ಯಮಂತ್ರಿಗಳ ಗಮನ ಸೆಳೆಯಲು ಈ ಬಂದ್. ನಮ್ಮ ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಬಂದ್ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ABOUT THE AUTHOR

...view details