ಬೆಂಗಳೂರು:ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇನ್ನೂ 2 ದಿನಗಳಲ್ಲಿ ಸೋಂಕು ಪರೀಕ್ಷೆಗೆ ರ‍್ಯಾಪಿಡ್ ಆ್ಯಂಟಿಜನ್ ಕಿಟ್ ಬಳಸಲು ನಿರ್ಧಾರ ಮಾಡಲಿದೆ ಎಂದು ನಿಮ್ಹಾನ್ಸ್ ಆಸ್ಪತ್ರೆಯ ವೈರಾಲಜಿಸ್ಟ್ ಡಾ. ವಿ. ರವಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ರ‍್ಯಾಪಿಡ್ ಆ್ಯಂಟಿಜನ್ ಕಿಟ್ನಲ್ಲಿ ಫಲಿತಾಂಶ 20 ನಿಮಿಷದಲ್ಲಿ ಬರಲಿದ್ದು, ವೈರಸ್ನ ಪ್ರೊಟೀನ್ ಅಂಶಗಳನ್ನು ಇದು ಕಂಡುಹಿಡಿಯುತ್ತದೆ. ಈ ಪರೀಕ್ಷೆಯನ್ನು ಸ್ವಾಬ್ ದ್ರವವನ್ನು ಪ್ರಗ್ನೆನ್ಸಿ ಪರೀಕ್ಷಾ ಕಿಟ್ನಲ್ಲಿ ಇರುವ ರೀತಿ ಸ್ಟ್ರಿಪ್ಗೆ ಹಾಕಿದ್ದಲ್ಲಿ 20 ನಿಮಿಷದಲ್ಲಿ ಫಲಿತಾಂಶ ತಿಳಿದುಬರುತ್ತದೆ. ಆದರೆ ಇದು ಅಷ್ಟು ಪರಿಣಾಮಕಾರಿ ಅಲ್ಲ. 100 ಆರ್ಟಿಪಿಸಿಆರ್ ಸ್ವಾಬ್ ಟೆಸ್ಟ್ ಮಾದರಿಯನ್ನು ಇದರಲ್ಲಿ ಪರೀಕ್ಷೆ ಮಾಡಿದರೆ ಕೇವಲ 50 ರಿಂದ 60ರಲ್ಲಿ ಮಾತ್ರ ಪಾಸಿಟಿವ್ ಬರುತ್ತದೆ ಎಂದಿರುವ ಡಾ. ರವಿ, ಆ್ಯಂಟಿಜನ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಪಿಸಿಆರ್ ಟೆಸ್ಟ್ ಅಗತ್ಯವಿಲ್ಲ. ನೆಗೆಟಿವ್ ಬಂದರೆ ಪಿಸಿಆರ್ ಪರೀಕ್ಷೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
'ಈಟಿವಿ ಭಾರತ' ಪ್ರತಿನಿಧಿ ಜೊತೆ ನಿಮ್ಹಾನ್ಸ್ ಆಸ್ಪತ್ರೆಯ ವೈರಾಲಜಿಸ್ಟ್ ಡಾ. ವಿ. ರವಿ ಮಾತು ಆರ್ಟಿಪಿಸಿಆರ್ ಪರೀಕ್ಷೆ ಫಲಿತಾಂಶ ನಿಧಾನ.. ಆದರೆ 90-95% ನಿಖರ
ಆರ್ಟಿಪಿಸಿಆರ್ ಟೆಸ್ಟ್ಗಳ ಫಲಿತಾಂಶಕ್ಕೆ 8 ಗಂಟೆ ಬೇಕು, ಇದರ ಜೊತೆಗೆ ಅತ್ಯಾಧುನಿಕ ಲ್ಯಾಬ್ಗಳ ಅವಶ್ಯಕತೆ ಇರುತ್ತದೆ. ರಾಜ್ಯದಲ್ಲಿ ಕೆಲ ಕಡೆ ಮಾತ್ರ ಲಭ್ಯವಿರುವ ಲ್ಯಾಬ್ಗಳು ಈಗ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದರೂ ಇನ್ನೂ ಹೆಚ್ಚಿನ ಕೇಂದ್ರಗಳ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ರ‍್ಯಾಪಿಡ್ ಆ್ಯಂಟಿಜನ್ ಕಿಟ್ ಸಹಾಯದಿಂದ ಸೋಂಕು ಪರೀಕ್ಷೆಯನ್ನು ಹೆಚ್ಚಿಸಬಹುದು. ಇದಕ್ಕೆ ಆರ್ಟಿಪಿಸಿಆರ್ ಲ್ಯಾಬ್ ಅವಶ್ಯಕತೆ ಇಲ್ಲ.
ಆ್ಯಂಟಿಜನ್ ಕಿಟ್ ಸೋಂಕು ದೃಢ ಮಾಡುವುದಕ್ಕೆ ಮಾತ್ರ ಉಪಯುಕ್ತವಾಗಿದ್ದು, ಈ ಫಲಿತಾಂಶದಲ್ಲಿ ನೆಗೆಟಿವ್ ಬಂದರೆ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಕಾರಣ ಸದ್ಯಕ್ಕಿರುವ ತಂತ್ರಜ್ಞಾನದಲ್ಲಿ ಆರ್ಟಿಪಿಸಿಆರ್ ಪರೀಕ್ಷೆಯ ಫಲಿತಾಂಶದ ನಿಖರತೆ ಶೇಕಡ 90 ರಿಂದ 95ರಷ್ಟು ಇದೆ.
ಈ ರ‍್ಯಾಪಿಡ್ ಆ್ಯಂಟಿಜನ್ ಕಿಟ್ ಬಳಕೆಯಿಂದ ಪರೀಕ್ಷೆ ಫಲಿತಾಂಶ ಬೇಗ ಬರಲಿದ್ದು, ಇದಕ್ಕೆ ಐಸಿಎಂಆರ್ ಕೆಲ ನಿರ್ದೇಶನಗಳನ್ನ ನೀಡಿದೆ. ಖಾಸಗಿ ತಯಾರಕರನ್ನು ಕೈಗೆಟುಕುವ ಬೆಲೆಗೆ ಆ್ಯಂಟಿಜನ್ ಕಿಟ್ ತಯಾರಿಸಲು ಸ್ವಾಗತಿಸಿದೆ. ನಗರದಲ್ಲಿ ಪ್ರಸ್ತುತವಾಗಿ ಹೆಚ್ಚಳ ಆಗುತ್ತಿರುವ ಕೊರೊನಾ ಸಂಖ್ಯೆ ಹಿನ್ನೆಲೆಯಲ್ಲಿ ರ‍್ಯಾಪಿಡ್ ಆ್ಯಂಟಿಜನ್ ಕಿಟ್ ಬಳಕೆ ಸೂಕ್ತ ಎಂದು ಡಾ.ರವಿ ಹೇಳುತ್ತಾರೆ.