ಕರ್ನಾಟಕ

karnataka

ETV Bharat / city

ಇಂದಿನಿಂದ ಒಂದು ವರ್ಷದವರೆಗೆ 'ಕನ್ನಡ ಕಾಯಕ ವರ್ಷ' ಆಚರಣೆ : ಸಿಎಂ ಯಡಿಯೂರಪ್ಪ - ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್

ಏಕೀಕರಣಗೊಂಡ ನಮ್ಮ ರಾಜ್ಯ ಉದಯವಾಗಿ 64 ವರ್ಷಗಳು ಪೂರೈಸಿದೆ. 65ರ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯು ಮಾತೃಭಾಷೆ/ಪ್ರಾದೇಶಿಕ ಭಾಷೆಯಲ್ಲಿ ಪ್ರಾರಂಭಿಕ ಶಿಕ್ಷಣಕ್ಕೆ ಒತ್ತು ನೀಡಿರುವುದು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಇನ್ನಷ್ಟು ಬಲ ನೀಡಲಿದೆ..

Kannada rajyotsava
ಸಿಎಂ ಯಡಿಯೂರಪ್ಪ

By

Published : Nov 1, 2020, 12:02 PM IST

Updated : Nov 1, 2020, 1:53 PM IST

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ 65ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಂಠೀರವ ಸ್ಟೇಡಿಯಂನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.‌

ಕೊರೊನಾ ಹಿನ್ನೆಲೆ ಶಾಲಾ ಮಕ್ಕಳ ಪ್ರವೇಶ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನ ಕೈ ಬಿಡಲಾಗಿತ್ತು. ಬೆಳಗ್ಗೆ 9ಗಂಟೆ ಸುಮಾರಿಗೆ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಸಕ ರಿಜ್ವಾನ್ ಅರ್ಷದ್ ಧ್ವಜಾರೋಹಣ ನೆರವೇರಿಸಿದರು. ನಂತರ ತಾಯಿ ಭುವನೇಶ್ವರಿಗೆ ಪುಷ್ಪನಮನ‌ ಸಲ್ಲಿಸಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್​ವೈ

ಬಳಿಕ ಮಾತಾನಾಡಿದ ಸಿಎಂ ಬಿಎಸ್​ವೈ, ಏಕೀಕರಣಗೊಂಡ ನಮ್ಮ ರಾಜ್ಯ ಉದಯವಾಗಿ 64 ವರ್ಷಗಳು ಪೂರೈಸಿದೆ. 65ರ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯು ಮಾತೃಭಾಷೆ/ಪ್ರಾದೇಶಿಕ ಭಾಷೆಯಲ್ಲಿ ಪ್ರಾರಂಭಿಕ ಶಿಕ್ಷಣಕ್ಕೆ ಒತ್ತು ನೀಡಿರುವುದು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಇನ್ನಷ್ಟು ಬಲ ನೀಡಲಿದೆ ಎಂದು ತಿಳಿಸಿದರು.

ಯಾವುದೇ ಭಾಷೆಯಾಗಲಿ ಅದಕ್ಕೆ ಅದರದ್ದೇ ಸೌಂದರ್ಯವಿದೆ, ಸತ್ವವಿದೆ. ಅದನ್ನು ಕಾಪಾಡುವ ಹೊಣೆ ನಮ್ಮದು. ನಮ್ಮ ನಡೆ-ನುಡಿ ಕನ್ನಡವಾಗಿರಲಿ. ಈ ನಿಟ್ಟಿನಲ್ಲಿ ಇಂದಿನಿಂದ 2021ರ ಅಕ್ಟೋಬರ್ 31ರವರೆಗೆ 'ಕನ್ನಡ ಕಾಯಕ ವರ್ಷ'ವನ್ನಾಗಿ ಆಚರಿಸಲಾಗುವುದು.‌ ಮುಂದಿನ ಒಂದು ವರ್ಷದಲ್ಲಿ ಕನ್ನಡ ಕಾಯಕ ವರ್ಷದ ಅಂಗವಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮದ ವಿವರಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಶೀಘ್ರವೇ ಪ್ರಕಟಿಸಲಾಗುವುದು ಹಾಗೂ ಜಾರಿಗೊಳಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ 65ನೇ ಕನ್ನಡ ರಾಜ್ಯೋತ್ಸವ ಆಚರಣೆ

ನಮ್ಮ ಭಾಷೆ ಉಳಿದರೆ ನಾವು ಉಳಿಯುತ್ತೇವೆ : ಸುರೇಶ್ ಕುಮಾರ್​​

ಕನ್ನಡದ ಬಗೆಗಿನ ಸರ್ಕಾರದ‌‌ ಬದ್ಧತೆ, ಸಂಕಲ್ಪಗಳನ್ನು ಕೊರೊನಾ ಕಸಿಯಲು ಅಸಾಧ್ಯ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು. ನಮ್ಮ ನಾಡು ಹಾಗೆಯೇ ನಮ್ಮ ಕಸ್ತೂರಿ ನುಡಿ ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ನಮ್ಮ ಭಾಷೆ ಅತ್ಯಂತ ಶ್ರೀಮಂತ, ಸಮೃದ್ಧ ಹಾಗೆಯೇ ಅತ್ಯಂತ ಗಟ್ಟಿತನದಿಂದ ಕೂಡಿದ ಭಾಷೆ.

2500ಕ್ಕೂ ಹೆಚ್ಚು ವರ್ಷಗಳ ಹಿನ್ನೆಲೆ ನಮ್ಮ ಭಾಷೆಯದು ಎಂಬುದು ನಮ್ಮ ಹೆಮ್ಮೆ. ನಾವು ನಮ್ಮ ಭಾಷೆಯನ್ನು ಶಿಕ್ಷಣ ಸೇರಿದಂತೆ ನಮ್ಮ ದೈನಂದಿನ ಎಲ್ಲ ವ್ಯವಹಾರಗಳಲ್ಲಿಯೂ ಬಳಸುವ ಮೂಲಕ ನಾವು ಉಳಿಸಿ ಬೆಳೆಸಬೇಕು. ನಮ್ಮ ಭಾಷೆ ಉಳಿದರೆ ನಾವು ಉಳಿಯುತ್ತೇವೆ. ಹಾಗಾಗಿ, ಕನ್ನಡದ ಹೊರತಾಗಿ ನಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು ಸಾಧ್ಯವಾಗದ ಮಾತು ಎಂದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್

ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ತನ್ನದೇ ಆದ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಯಾವುದೇ ಭಾಷಿಕ ಹಿನ್ನೆಲೆಯ ಮಕ್ಕಳೂ ಸಹ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲೇಬೇಕೆಂಬ ಹಿನ್ನೆಲೆಯಲ್ಲಿ ಜಾರಿಗೆ ಬಂದ ಕನ್ನಡ ಕಲಿಕಾ ಕಾಯ್ದೆ-2017ನ್ನು ಅನುಷ್ಠಾನಗೊಳಿಸುವಲ್ಲಿ ನಾವು ಕಠಿಣ ಕ್ರಮಗಳನ್ನು ಕೈಗೊಂಡಿರುವುದು ಎಲ್ಲರಿಗೂ ಗೊತ್ತಿರುವಂತಹುದೇ ಆಗಿದೆ.

ಈ ನೆಲದಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಕಲಿಯುವುದರೊಂದಿಗೆ ಕನ್ನಡದ ಜೊತೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ಸರ್ಕಾರದ ನಿಲುವಾಗಿದೆ ಎಂದು ಸಚಿವರು ತಿಳಿಸಿದರು.

ಮೊದಲ ಬಾರಿಗೆ ಸರ್ಕಾರಿ‌ ಶಾಲೆಗಳಲ್ಲಿ ದಾಖಲಾತಿ‌ ಹೆಚ್ಚಳ :ಸರ್ಕಾರಿ ಶಾಲೆಗಳ ಸಬಲೀಕರಣದೆಡೆ ನಮ್ಮ ಸರ್ಕಾರ ದಾಪುಗಾಲನ್ನಿಟ್ಟು ಮುಂದೆ ಸಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ಉಭಯ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದೆ. ಈ ಕ್ರಮವು ರಾಜ್ಯಾದ್ಯಂತ ವ್ಯಾಪಕವಾಗಿ ಸ್ವಾಗತಿಸಲ್ಪಟ್ಟಿದೆ.

ಈ ಶಾಲೆಗಳು ಕನ್ನಡದ ವಾತಾವರಣದಲ್ಲಿ ಆಂಗ್ಲಭಾಷೆಯನ್ನು ಕಲಿಯುವ ನಮ್ಮ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗಳನ್ನು ಎದುರಿಸಲು ಸಜ್ಜುಗೊಳಿಸುವ ಉದಾತ್ತ ನಿಲುವು ಹೊಂದಿವೆ. ಇದು ವೈಜ್ಞಾನಿಕವಾಗಿಯೂ ಕೂಡ ಮಾತೃಭಾಷೆ ಮೂಲಕ ಜಗತ್ತನ್ನು ನೋಡಬೇಕೆಂಬ ಹಿನ್ನೆಲೆಯಲ್ಲಿ ವ್ಯಾಪಕ ಪ್ರಶಂಸೆಗೊಳಗಾಗಿವೆ. ಕೊರೊನಾ ಅವಧಿಯಲ್ಲಿ ದುರ್ಬಲ ಕುಟುಂಬಗಳ ಮಕ್ಕಳು, ಪೋಷಕರು ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ. ಇಂತಹ ಸಂದರ್ಭದಲ್ಲೂ ಒಂದು ಬೆಳ್ಳಿಗೆರೆಯನ್ನು ಮೂಡಿಸಿರೋದು ನಮಗೆ ಸಂತಸದ ಸಂಗತಿ ಎಂದು ಸುರೇಶ್​ ಕುಮಾರ್​ ಹೇಳಿದರು.

ನಮ್ಮಲ್ಲಿನ ಅಂಕಿಅಂಶಗಳಂತೆ ಸುಮಾರು 90,000 ಮಕ್ಕಳು ಈಗಾಗಲೇ ಸರ್ಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದ್ದು, ಇದು ಕಳೆದ 14 ವರ್ಷಗಳಲ್ಲಿ ಮೊದಲ ಬಾರಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಪಿಯುಸಿ ವಿಜ್ಞಾನದ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಕನ್ನಡ ಮಾಧ್ಯಮದಲ್ಲಿ ತಯಾರು ಮಾಡಿ ನೀಡಿರುವುದು ನಮ್ಮ ಸರ್ಕಾರದ ಕನ್ನಡಪರ ಕಾಳಜಿಯ ಧ್ಯೋತಕ ಎಂಬುದನ್ನು ಗಮನಿಸಬೇಕಿದೆ ಅಂದರು.

Last Updated : Nov 1, 2020, 1:53 PM IST

ABOUT THE AUTHOR

...view details