ಬೆಂಗಳೂರು: ಕಿಸಾನ್ ಯೂನಿಯನ್ಮುಖಂಡ ರಾಕೇಶ್ ಟಿಕಾಯಿತ್ ಮೇಲೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. 450 ಪುಟದ ಚಾರ್ಜ್ಶೀಟ್ನಲ್ಲಿ 20 ಮಂದಿ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. 89 ಜನರನ್ನು ಸಾಕ್ಷಿಯನ್ನಾಗಿಸಿದೆ. ಹಿಂದೂ ಪರ ಸಂಘಟನೆಯೊಂದರ ಕಾರ್ಯಕರ್ತ ಭರತ್ ಶೆಟ್ಟಿ ಸಹಚರರಾದ ಶಿವಕುಮಾರ್, ಪ್ರದೀಪ್ ಕುಮಾರ್ ಹಾಗೂ ಉಮಾದೇವಿ ಆರೋಪಿಗಳಾಗಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಯಾದ ಭರತ್ ಶೆಟ್ಟಿಗೆ ಜಾಮೀನು ಸಿಕ್ಕಿದೆ. ಅವರ ಹೇಳಿಕೆಯನ್ನೂ ಚಾರ್ಜ್ಶೀಟ್ನಲ್ಲಿ ದಾಖಲಿಸಲಾಗಿದ್ದು, ರಾಜ್ಯದಲ್ಲಿ ತಾವು ಹೆಸರು ಮಾಡಬೇಕೆಂಬ ಉದ್ದೇಶದಿಂದ ರೈತ ನಾಯಕನಿಗೆ ಮಸಿ ಬಳಿದಿರುವುದಾಗಿ ಹೇಳಿದ ಬಗ್ಗೆ ಇದರಲ್ಲಿದೆ. ಆರೋಪಿಗಳು ಪರಸ್ಪರ ಮಾತನಾಡಿದ ಆಡಿಯೋ ಸಾಕ್ಷಿಯನ್ನು ಕೂಡ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.