ಬೆಂಗಳೂರು:ಕೋವಿಡ್ ಭೀತಿ ಹಿನ್ನೆಲೆ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಈ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ನಗರ ಜಿಲ್ಲಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ ಸಭೆ ನಡೆಯಿತು.
ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ: ಸ್ವಾತಂತ್ರ್ಯ ದಿನಾಚರಣೆಗೆ ಸಾರ್ವಜನಿಕರಿಗಿಲ್ಲ ಅವಕಾಶ - ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ, ಪಥಸಂಚಲನ ಇರುವುದಿಲ್ಲ. ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನಡೆಯಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಸಭೆ ಬಳಿಕ ಮಾತನಾಡಿದ ಮಂಜುನಾಥ್ ಪ್ರಸಾದ್, ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುವುದು. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಬೆಳಗ್ಗೆ 9 ಗಂಟೆಗೆ ಮಾಣಿಕ್ ಷಾ ಮೈದಾನದಲ್ಲಿ ಸಿಎಂ ಬಿಎಸ್ವೈ ಧ್ವಜಾರೋಹಣ ನಡೆಸಲಿದ್ದಾರೆ. 10:30ರೊಳಗೆ ಕಾರ್ಯಕ್ರಮ ಮುಗಿಯಲಿದೆ. ಪ್ರತಿ ವರ್ಷದಂತೆ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ ಇರುವುದಿಲ್ಲ. ಧ್ವಜಾರೋಹಣದ ಬಳಿಕ ಪಥಸಂಚಲನ ಕೂಡ ಇರುವುದಿಲ್ಲ. ಪೊಲೀಸರಿಂದ ಗಾಡ್ ಆಫ್ ಹಾನರ್ ಸಾಮಾಜಿಕ ಅಂತರದಲ್ಲಿ ನಡೆಯಲಿದೆ ಎಂದರು.
ಪ್ರತಿ ವರ್ಷ 16 ಸಾವಿರ ಆಹ್ವಾನ ಪತ್ರಿಕೆ ಹಂಚಲಾಗುತ್ತಿತ್ತು. ಕೊರೊನಾ ಹಿನ್ನೆಲೆ ದೈಹಿಕ ಅಂತರ ಕಾಪಾಡುವುದು ಅಗತ್ಯವಾದ್ದರಿಂದ ಈ ಬಾರಿ 200 ಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕಾರ್ಯಕ್ರಮಕ್ಕೆ 75 ಮಂದಿ ಕೊರೊನಾ ವಾರಿಯರ್ಸ್, ಕೋವಿಡ್ನಿಂದ ಗುಣಮುಖರಾದ 25 ಜನರನ್ನು ಆಹ್ವಾನಿಸಲಾಗುವುದು. ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾತ್ರ ಕಾರ್ಯಕ್ರಮಕ್ಕೆ ಬರಲು ಅವಕಾಶವಿದೆ. ಮಾಣಿಕ್ ಷಾ ಮೈದಾನದಲ್ಲಿ ಆ್ಯಂಟಿಜೆನ್ ಟೆಸ್ಟ್ ಕಿಟ್, ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.