ಬೆಂಗಳೂರು: ದಿನೇ ದಿನೆ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, 26 ದಿನಗಳಲ್ಲಿ 2,442 ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿವೆ. ಆರೋಗ್ಯ ಇಲಾಖೆಯ ಮಾಹಿತಿಯಲ್ಲಿ ಜುಲೈ ತಿಂಗಳಲ್ಲಿ ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲೇ 2,442 ಜನ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವರ್ಷದ ಆರಂಭದಲ್ಲಿ ನಿಯಂತ್ರಣದಲ್ಲಿದ್ದ ಡೆಂಗ್ಯೂ ಮುಂಗಾರು ಮಳೆ ಆರಂಭವಾದ ಬಳಿಕ ಎಲ್ಲೆಡೆ ವ್ಯಾಪಿಸಿದೆ. ಈ ವರ್ಷ ಜೂನ್ ಅಂತ್ಯದವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 951 ಪ್ರಕರಣಗಳು ವರದಿಯಾಗಿದ್ದವು. ಇದೀಗ ಡೆಂಗ್ಯೂ ಜ್ವರಕ್ಕೆ ಬಳಲಿದವರ ಸಂಖ್ಯೆ 3,393ಕ್ಕೆ ತಲುಪಿದೆ. ಅಷ್ಟೇ ಅಲ್ಲದೆ ಪ್ರಮುಖ ಏರಿಯಾಗಳಲ್ಲಿ ಡೆಂಗ್ಯೂ ಡೇಂಜರ್ ಜೋನ್ನಲ್ಲಿದೆ ಎಂದು ತಿಳಿದುಬಂದಿದೆ.
ಇದೇ ವರ್ಷ ಪಾಲಿಕೆ ವ್ಯಾಪ್ತಿಯಲ್ಲಿ 64,613 ಜನರಿಗೆ ಡೆಂಗ್ಯೂ ಇರುವ ಶಂಕೆ ವ್ಯಕ್ತವಾಗಿತ್ತು. ಇದರಲ್ಲಿ 15,683 ಮಂದಿಯನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ವಾರದಲ್ಲಿ 8,165 ಜನರಲ್ಲಿ ಡೆಂಗ್ಯೂ ಇರುವ ಶಂಕೆ ವ್ಯಕ್ತವಾಗಿತ್ತು. ಈ ಪೈಕಿ 2,184 ಮಂದಿಯ ರಕ್ತವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 442 ಮಂದಿಗೆ ಈ ಜ್ವರ ಇರುವುದು ದೃಢಪಟ್ಟಿದೆ.