ಬೆಂಗಳೂರು:ಪ್ರೀತಿಯ ಅಪ್ಪು, ಕರ್ನಾಟಕದ ಯುವರತ್ನ ಕಣ್ಮರೆಯಾಗಿರುವುದು ಎಲ್ಲರಲ್ಲೂ ಬೇಸರ ಉಂಟು ಮಾಡಿದೆ. ಚಿತ್ರರಂಗದ ಹಲವರು ಪುನೀತ್ ಸಮಾಧಿ ಸ್ಥಳಕ್ಕೆ ಬಂದು ದರ್ಶನ ಪಡೆಯುತ್ತಿದ್ದಾರೆ.
ಚಿತ್ರರಂಗದ ಹಲವಾರು ನಟರು ಅಪ್ಪುವಿನ ಗುಣಗಾನ ಮಾಡುತ್ತಿದ್ದಾರೆ. ಅವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಅವರು ಕೂಡ ಪುನೀತ್ರ ಜತೆಗಿನ ಬಾಂಧವ್ಯವನ್ನು 'ಈಟಿವಿ ಭಾರತ್' ಜತೆಗೆ ಹಂಚಿಕೊಂಡಿದ್ದಾರೆ.
ಹಿರಿಯ ನಟ ಹೊನ್ನವಳ್ಳಿ ಕೃಷ್ಣ 'ಅಪ್ಪುನನ್ನು ನಾನು ಚಿಕ್ಕಂದಿನಿಂದಲೂ ನೋಡಿಕೊಂಡು ಬಂದಿದ್ದೇನೆ. ಬೆಟ್ಟದ ಹೂವು, ಪ್ರೇಮದ ಕಾಣಿಕೆ, ಚಲಿಸುವ ಮೋಡ ಸಿನಿಮಾದಲ್ಲೂ ಅವರ ಅಭಿನಯವನ್ನು ಗಮನಿಸಿದ್ದೇನೆ. ಅವರು ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿ ಪಳಗಿದ್ದರು' ಎಂದು ಹೇಳಿದ್ದಾರೆ.
'ಮನುಷ್ಯನಿಗೆ ಆಸ್ತಿ, ಅಂತಸ್ತು ಮುಖ್ಯವಲ್ಲ. ಕುಟುಂಬ, ಪ್ರೀತಿ ಮುಖ್ಯ. ಅಪ್ಪು ಅವರ ಕುಟುಂಬವನ್ನು ನೋಡಿದರೆ ಕರುಳು ಚುರುಕ್ ಅನ್ನುತ್ತೆ. ಪತ್ನಿ ಅಶ್ವಿನಿ, ಮಕ್ಕಳನ್ನು ಕಂಡರೆ ಅಯ್ಯೋ ಅನ್ನಿಸುತ್ತೆ' ಎಂದರು.
ರಾಜ್ ನಟನೆ ಕಂಡು ಹೆದರಿದ್ದ ಅಪ್ಪು:
'ಭಕ್ತ ಪ್ರಹ್ಲಾದ ಸಿನಿಮಾ ಚಿತ್ರೀಕರಣದ ವೇಳೆ ನಡೆದ ಪ್ರಸಂಗವನ್ನು ನೆನಪಿಸಿಕೊಂಡ ಹೊನ್ನವಳ್ಳಿ ಕೃಷ್ಣ ಅವರು, ಭಕ್ತ ಪ್ರಹ್ಲಾದ ಚಿತ್ರೀಕರಣದ ವೇಳೆ ರಾಜಕುಮಾರ್ ಅವರು ಹಿರಣ್ಯ ಕಶಪ್ಪನ ಪಾತ್ರದಲ್ಲಿನ ಉಗ್ರರೂಪದ ಕಣ್ಣುಗಳನ್ನು ಕಂಡು ಅಪ್ಪು ಹೆದರಿದ್ದರು. ಆಗ ರಾಜಕುಮಾರ್ ಅವರು ಸಂತೈಸಿ ಮಗು ಭಯವಿದ್ದ ಕಡೆ ಜಯ ಇರುತ್ತೆ ಎಂದು ಹೇಳಿದಾಗ ಪುನೀತ್ ತಂದೆಯನ್ನೂ ಮೀರಿಸುವಂತೆ ನಟನೆ ಮಾಡಿದ್ದರು' ಎಂದು ನೆನಪಿಸಿಕೊಂಡರು.