ಶಿವಮೊಗ್ಗ:ಗೃಹ ಸಚಿವರ ಮನೆ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದನ್ನು ವ್ಯಂಗ್ಯವಾಡಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ತಿರುಗೇಟು ನೀಡಿದರು. ಸೈದ್ಧಾಂತಿಕವಾಗಿ ನಾವೆಲ್ಲ ಒಂದಾಗಿದ್ದೇವೆ. ಮನೆ ಬಳಿ ಬಂದು ಎಬಿವಿಪಿಯವರು ಪ್ರತಿಭಟನೆ ನಡೆಸಿದ್ದಾರೆ. ಪಿಎಫ್ಐ, ಎಸ್ಡಿಪಿಐ ಸೇರಿದಂತೆ ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಹೋರಾಟ ಮಾಡಿದ್ದಾರೆ. ನಮ್ಮಲ್ಲಿ ಬಾಡಿಗೆ ಹಣಕ್ಕೆ ಇರುವಂತ ಕಾರ್ಯಕರ್ತರಿಲ್ಲ. ಅವರ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.
ಒಬ್ಬ ಕಾರ್ಯಕರ್ತರಾಗಿ ಬೆಳೆಯಲು ಸಾಕಷ್ಟು ವರ್ಷ ಬೇಕು. ಬಡವನಾದರೂ ಆತ ಪಕ್ಷಕ್ಕೆ ಹಾಗೂ ಸಂಘಟನೆಗೆ ಒತ್ತುನೀಡುತ್ತಾನೆ. ಇಂಥ ಕಾರ್ಯಕರ್ತನನ್ನು ಕಳೆದುಕೊಂಡಾಗ ನೋವಾಗುವುದು ಸಹಜ. ಆಗ ಆಕ್ರೋಶವೂ ವ್ಯಕ್ತವಾಗುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಮತಾಂಧ ಶಕ್ತಿಗಳ ಮೇಲಿದ್ದ 2000 ಕೇಸ್ ಹಿಂಪಡೆದರು. ಟಿಪ್ಪು ಜಯಂತಿ ಆರಂಭಿಸುವ ಮೂಲಕ ರಕ್ತಪಾತ ಮಾಡಿಸಿದರು. ವೋಟ್ ಬ್ಯಾಂಕ್ಗಾಗಿ ಯಾರ್ಯಾರನ್ನೋ ಬೆಳೆಸಿದ್ದಾರೆ. ನಮ್ಮ ಮನೆ ಎದುರು ಪ್ರತಿಭಟನೆ ನಡೆಸಿದರು ಎಂದಾಕ್ಷಾಣ ಅವರು ಕಾಂಗ್ರೆಸ್ ಜೊತೆಗೆ ಹೋಗುವುದಿಲ್ಲ ಎಂದರು.
ಕಾಂಗ್ರೆಸ್ ಅಸಹ್ಯ ತೊಳೆಯಲು ಟೈಂ ಬೇಕು:ಸಿದ್ದರಾಮಯ್ಯ ಸರ್ಕಾರವಿದ್ದಾಗ ದುಷ್ಕೃತ್ಯ ನಡೆದರೆ ಕೇಸನ್ನೇ ದಾಖಲಿಸುತ್ತಿರಲಿಲ್ಲ. ಹರ್ಷ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಆರಾಮಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಜೈಲಿನ ಮೇಲೆ ದಾಳಿ ನಡೆಸಿ 15 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಿದ್ದೇವೆ. ಕಾಂಗ್ರೆಸ್ ಮಾಡಿಟ್ಟಿರುವ ಅಸಹ್ಯವನ್ನು ತೊಳೆಯಲು ಸಮಯ ಹಿಡಿಯುತ್ತಿದೆ ಎಂದು ಟೀಕಿಸಿದರು.