ಕರ್ನಾಟಕ

karnataka

ಹಿಜಾಬ್-ಕೇಸರಿ ಶಾಲು ಸಂಘರ್ಷ.. ಇಂದು ಸರ್ಕಾರದ ಪರ ಅಡ್ವೊಕೇಟ್ ಜನರಲ್ ವಾದ ಮಂಡನೆ

By

Published : Feb 18, 2022, 2:54 PM IST

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಇಂದು ಮಧ್ಯಾಹ್ನ 2.30 ರಿಂದ ಹೈಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ..

karnakataka
ಹಿಜಾಬ್ ಸಂಘರ್ಷ

ಬೆಂಗಳೂರು :ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಇಂದು ಮಧ್ಯಾಹ್ನ 2.30 ರಿಂದ ಹೈಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.

ಈ ಕುರಿತಂತೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಷಮ್ ಹಾಗೂ ಇತರೆ ವಿದ್ಯಾರ್ಥಿನಿಯರ ಪೋಷಕರು ಸಲ್ಲಿಸಿರುವ 9 ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿರುವ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.

ಪ್ರಕರಣವನ್ನು ಇತ್ಯರ್ಥಪಡಿಸುವವರೆಗೆ ಸಮವಸ್ತ್ರ ನಿಗದಿಪಡಿಸಿರುವ ಶಾಲಾ-ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ಗುರುತನ್ನು ಬಿಂಬಿಸುವ ಉಡುಪುಗಳನ್ನು ಧರಿಸದಂತೆ ತ್ರಿಸದಸ್ಯ ಪೀಠ ಈಗಾಗಲೇ ಮಧ್ಯಂತರ ಆದೇಶ ಹೊರಡಿಸಿದ್ದು, ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ದಿನಂಪ್ರತಿ ವಿಚಾರಣೆ ನಡೆಸಲಾಗುತ್ತಿದೆ.

ಬಿಂದಿ, ಕುಂಕುಮ ಓಕೆ, ಹಿಜಾಬ್​ ಮೇಲೆ ಕೋಪ ಯಾಕೆ?:ಅರ್ಜಿದಾರ ವಿದ್ಯಾರ್ಥಿನಿಯರ ಪರ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ, ದೇವದತ್ ಕಾಮತ್, ಪ್ರೊ. ರವಿವರ್ಮ ಕುಮಾರ್, ಡಾ. ವಿನೋದ್ ಕುಲಕರ್ಣಿ ಸೇರಿದಂತೆ ಹಲವರು ವಾದ ಮಂಡಿಸಿದ್ದಾರೆ. ಮಹಿಳೆಯರು ಹಿಜಾಬ್ ಧರಿಸುವಂತೆ ಕುರಾನ್​ನಲ್ಲಿ ಹೇಳಲಾಗಿದೆ.

ಆದ್ದರಿಂದ, ಹಿಜಾಬ್ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆಯಾಗಿದೆ. ಈ ಧಾರ್ಮಿಕ ಹಕ್ಕನ್ನು ಸಂವಿಧಾನ ಮೂಲಭೂತ ಹಕ್ಕಾಗಿ ನೀಡಿದೆ. ಆದ್ದರಿಂದ ಹಿಜಾಬ್ ಧರಿಸಲು ಅವಕಾಶ ನೀಡಬೇಕು. ಹಿಜಾಬ್ ನಿರ್ಬಂಧಿಸಿರುವ ಕ್ರಮ ಕಾನೂನು ಬಾಹಿರ ಎಂದು ವಾದ ಮಂಡಿಸಿದ್ದಾರೆ.

ಅಲ್ಲದೇ, ಸರ್ಕಾರದ ಪ್ರಾಧಿಕಾರವಲ್ಲದ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ)ಗೆ ಸಮವಸ್ತ್ರ ನಿಗದಿ ಮಾಡುವ ಅಧಿಕಾರ ನೀಡಿ, ಅವರು ಹಿಜಾಬ್ ನಿರ್ಬಂಧಿಸಿರುವ ಕ್ರಮ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದ್ದಾರೆ. ಜತೆಗೆ, ಶಾಲೆಗಳಲ್ಲಿ ಹಿಂದೂ ಸಂಪ್ರದಾಯದಂತೆ ಬಳೆ-ಬಿಂದಿ ಧರಿಸುವುದನ್ನು ನಿರ್ಬಂಧಿಸದ ಸರ್ಕಾರ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ನಿರ್ಬಂಧಿಸಿದ್ದೇಕೆ ಎಂದು ಪ್ರೊ. ರವಿವರ್ಮ ಕುಮಾರ್ ಪೂರ್ಣ ಪೀಠದೆದುರು ಪ್ರಶ್ನೆ ಎತ್ತಿದ್ದಾರೆ.

ಈ ಎಲ್ಲ ವಾದಗಳಿಗೆ ಇದೀಗ ಸರ್ಕಾರ ಸೂಕ್ತ ಪ್ರತ್ಯುತ್ತರ ನೀಡುವ ಮೂಲಕ ತನ್ನ ಆದೇಶವನ್ನು ಸಮರ್ಥಿಸಿಕೊಳ್ಳಬೇಕಿದ್ದು, ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಪೀಠದ ಮುಂದೆ ವಾದ ಮಂಡಿಸಲಿದ್ದಾರೆ.

ಇದನ್ನೂ ಓದಿ:ಹಿಜಾಬ್‌ ಹಾಕಿಸೋಕೆ, ತೆಗೆಸೋಕೆ ಬಂದವರನ್ನ ಒದ್ದು ಒಳಗೆ ಹಾಕಿ.. ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ABOUT THE AUTHOR

...view details