ಕರ್ನಾಟಕ

karnataka

ETV Bharat / city

ಎಸ್ಎಸ್ಎಲ್​ಸಿ ಅಂಕಪಟ್ಟಿಯಲ್ಲಿ ಶಾಲೆ ಹೆಸರು ನಮೂದಿಸಲು ಹೈಕೋರ್ಟ್ ಆದೇಶ - school name in SSLC mark card

ಶೈಕ್ಷಣಿಕ ವರ್ಷದ ನಡುವೆ ಮಾನ್ಯತೆ ಹಿಂಪಡೆದಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಅವರ ಎಸ್ಎಸ್ಎಲ್​ಸಿ ಅಂಕಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

High Court order to govt to enter the school name in SSLC mark card
ಎಸ್ಎಸ್ಎಲ್​ಸಿ ಅಂಕಪಟ್ಟಿಯಲ್ಲಿ ಶಾಲೆ ಹೆಸರು ನಮೂದಿಸಲು ಹೈಕೋರ್ಟ್ ಆದೇಶ

By

Published : Apr 26, 2022, 7:30 PM IST

ಬೆಂಗಳೂರು: ಶೈಕ್ಷಣಿಕ ವರ್ಷದ ನಡುವೆ ಮಾನ್ಯತೆ ಹಿಂಪಡೆದಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಅವರ ಎಸ್ಎಸ್ಎಲ್​ಸಿ ಅಂಕಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಈ ಕುರಿತು ಬೆಂಗಳೂರಿನ ವಿವೇಕನಗರದ ಶಾಂತಿ ನಿಕೇತನ ಪ್ರೌಢಶಾಲೆ ಸೇರಿದಂತೆ ಎಂಟು ಶಾಲೆಗಳು ಸಲ್ಲಿಸಿದ್ದ ರಿಟ್‌ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಎಸ್​ಎಸ್​ಎಲ್​ಸಿ ಅಂಕಪಟ್ಟಿಗಳಲ್ಲಿ ಅವರ ಶಾಲೆಗಳ ಹೆಸರು ನಮೂದಿಸಲು ನಿರಾಕರಿಸುವುದು ಏಕಪಕ್ಷೀಯ ನಿರ್ಧಾರವಾಗಲಿದೆ. ಹಾಗಾಗಿ ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರು ಮತ್ತು ಎಸ್ಎಸ್ಎಲ್​ಸಿ ಪರೀಕ್ಷಾ ಮಂಡಳಿಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಸರ್ಕಾರ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಕೆಲ ಶಾಲೆಗಳ ಮಾನ್ಯತೆ ಹಿಂಪಡೆದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಶಾಲೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಅರ್ಜಿಯಲ್ಲಿ, ಶಾಶ್ವತ ಮಾನ್ಯತೆ ಇದ್ದರೂ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಸರ್ಕಾರವು ನಮ್ಮ ಶಾಲೆಗಳ ಮಾನ್ಯತೆ ಹಿಂಪಡೆದಿದೆ. ಹೀಗಾಗಿ, ನಮ್ಮ ಶಾಲೆಯಲ್ಲಿ ಅಭ್ಯಾಸ ಮಾಡಿರುವ ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳಿಗೆ ಬೇರೆ ಶಾಲೆಗಳಲ್ಲಿ ಪರೀಕ್ಷೆ ಬರೆಸಲಾಗಿದೆ. ಇದರಿಂದ, ಪರೀಕ್ಷಾ ಫಲಿತಾಂಶ ಪಟ್ಟಿಯಲ್ಲಿ ನಮ್ಮ ಶಾಲೆಗಳ ಹೆಸರನ್ನು ಕೈಬಿಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು. ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ ವಾದ ಮಂಡಿಸಿದ್ದರು.

ಇದನ್ನೂ ಓದಿ:ಗೃಹ ಸಚಿವರ ವಜಾ ಕೋರಿ ರಾಜ್ಯಪಾಲರಿಗೆ ಆಪ್ ಮನವಿ

ABOUT THE AUTHOR

...view details