ಕರ್ನಾಟಕ

karnataka

ಆನೇಕಲ್ ನೆಲಮಂಗಲ ರಸ್ತೆ ಅಗಲೀಕರಣ ವಿಳಂಬ: 18 ಮರಗಳ ತೆರವಿಗೆ ಹೈಕೋರ್ಟ್ ಅನುಮತಿ

By

Published : Dec 25, 2021, 5:17 PM IST

ಕಳೆದ 14 ತಿಂಗಳಿಂದ ಆನೇಕಲ್-ನೆಲಮಂಗಲ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ 18 ಮರಗಳನ್ನು ತೆರವು ಮಾಡಲು ಹೈಕೋರ್ಟ್ ಅನುಮತಿ ನೀಡಿದೆ.

High Court
ಹೈಕೋರ್ಟ್

ಬೆಂಗಳೂರು:ಆನೇಕಲ್-ನೆಲಮಂಗಲ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ 18 ಪಾರಂಪರಿಕ ಮರಗಳನ್ನು ತೆರವು ಮಾಡಲು ಹೈಕೋರ್ಟ್ ಅನುಮತಿ ನೀಡುವ ಮೂಲಕ ಕಳೆದ 14 ತಿಂಗಳಿಂದ ವಿಳಂಬವಾಗಿದ್ದ ಕಾಮಗಾರಿಗೆ ಗ್ರೀನ್ ಸಿಗ್ನಲ್ ತೋರಿದೆ.

ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳಿಗೆ ನಗರದಲ್ಲಿರುವ ಮರಗಳನ್ನು ತೆರವು ಮಾಡುತ್ತಿರುವ ಕ್ರಮ ಪ್ರಶ್ನಿಸಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಹಾಗೂ ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಮರಗಳನ್ನು ಕತ್ತರಿಸಬೇಕೇ ಬೇಡವೇ ಎಂಬ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ನಾವು ತಜ್ಞರಲ್ಲ. ಆದರೆ, ಮರಗಳ ತೆರವು ಸಂಬಂಧ ಜಿಕೆವಿಕೆ ತಜ್ಞರ ಸಮಿತಿ ವರದಿ ನೀಡಿದೆ. ಅದರಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ತೆರವು ಮಾಡಲು ಉದ್ದೇಶಿಸಿರುವ 18 ಮರಗಳನ್ನು ಕತ್ತರಿಸಿ, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಂದುವರೆಸಬಹುದು ಎಂದು ಪೀಠ ಆದೇಶಿಸಿದೆ.

ಇದೇ ವೇಳೆ ತಜ್ಞರ ಸಮಿತಿ ವರದಿಯಂತೆ 9 ಮರಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಹಾಗೂ ಅವುಗಳನ್ನು ನಿರ್ವಹಣೆ ಮಾಡಬೇಕು. ಅಲ್ಲದೇ, ಕತ್ತರಿಸುವ ಮರಗಳಿಗೆ ಪರ್ಯಾಯವಾಗಿ ಹೆಚ್ಚಿನ ಗಿಡಗಳನ್ನು ನೆಟ್ಟು ಅರಣ್ಯೀಕರಣ ಕೈಗೊಳ್ಳಬೇಕು ಎಂದು ಆದೇಶಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾಗಳಲ್ಲಿ ಡಿಸೆಂಬರ್ 26, 27ಕ್ಕೆ ಕರೆಂಟ್ ಕಟ್​​

ನೆಲಮಂಗಲ - ಆನೇಕಲ್ ಮಾರ್ಗದ ರಸ್ತೆ ಅಗಲೀಕರಣಕ್ಕೆ ಮರಗಳನ್ನು ಕತ್ತರಿಸದಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ರಸ್ತೆ ಮಾರ್ಗವನ್ನು ಬದಲಿಸುವಂತೆ ಕೋರಿದ್ದರು. ಯೋಜನೆ ಅನುಸಾರ ರಸ್ತೆ ವಿಸ್ತರಣೆ ಮಾಡಿದರೆ 28 ಪಾರಂಪರಿಕ ಮರಗಳು ನಾಶವಾಗಲಿವೆ. ಮರಗಳು ನಾಶವಾದರೆ ಪರಿಸರದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ, ರಸ್ತೆ ಮಾರ್ಗವನ್ನು ಕೊಂಚ ಬದಲಾವಣೆ ಮಾಡಿದರೆ ಮರಗಳನ್ನು ರಕ್ಷಿಸಬಹುದು ಎಂದಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಕೆಆರ್ ಡಿಸಿಎಲ್ ಮಾರ್ಗ ಬದಲಾವಣೆ ಕಷ್ಟ. ಈಗಾಗಲೇ ರಸ್ತೆ ಅಗಲೀಕರಣಕ್ಕೆ ಯೋಜನೆ ಅಂತಿಮಗೊಳಿಸಲಾಗಿದೆ. ಮಾರ್ಗ ಬದಲಿಸಬೇಕಾದರೆ ಹೊಸದಾಗಿ ಭೂಮಿ ಗುರುತಿಸಿ, ಅದಕ್ಕೆ ಪರಿಹಾರ ನೀಡಿ ನಂತರ ಯೋಜನೆ ಪ್ರಾರಂಭಿಸಲು ಸಾಕಷ್ಟು ಸಮಯ ಹಿಡಿಯುತ್ತದೆ.

ಈಗಾಗಲೇ ಮರಗಳ ತೆರವು ಯೋಜನೆಗೆ ಅಡ್ಡಿಯಾಗಿದ್ದ, 14 ತಿಂಗಳ ವಿಳಂಬವಾಗಿದೆ. ಇದರಿಂದಾಗಿ ಯೋಜನೆ ವೆಚ್ಚವೂ ಹೆಚ್ಚಾಗಲಿದೆ. ಆದ್ದರಿಂದ ಮರಗಳ ತೆರವಿಗೆ ಅನುಮತಿ ನೀಡಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮರಗಳ ತೆರವು ಸಂಬಂಧ ವರದಿ ನೀಡುವಂತೆ ಜಿಕೆವಿಕೆ ತಜ್ಞರ ಸಮಿತಿಗೆ ಸೂಚಿಸಿತ್ತು.

ABOUT THE AUTHOR

...view details