ಶುಶ್ರೂಷಕರು ಸೇರಿ ಗ್ರೂಪ್ ಡಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಸೂಚನೆ - ಗುತ್ತಿಗೆ ಆಧಾರದಲ್ಲಿ ಭರ್ತಿ
ರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ ಶುಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್, ಪಾರ್ಮಸಿಸ್ಟ್ ಮತ್ತು ಗ್ರೂಪ್-ಡಿ ವೃಂದದ ಹುದ್ದೆಗಳನ್ನು ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಭರ್ತಿ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಆದೇಶಿಸಿದೆ.
ಬೆಂಗಳೂರು: ಕೋವಿಡ್-19 ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್, ಪಾರ್ಮಸಿಸ್ಟ್ ಮತ್ತು ಗ್ರೂಪ್-ಡಿ ವೃಂದದ ಎಲ್ಲಾ ಹುದ್ದೆಗಳನ್ನು ಸೆ.30ರವರೆಗೆ ಗುತ್ತಿಗೆ/ ಹೊರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆೆ.
ಈ ಸಂಬಂಧ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕೋವಿಡ್-19ನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ ಶುಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್, ಪಾರ್ಮಸಿಸ್ಟ್ ಮತ್ತು ಗ್ರೂಪ್-ಡಿ ವೃಂದದ ಎಲ್ಲಾ ಹುದ್ದೆಗಳನ್ನು 6 ತಿಂಗಳ ಅವಧಿಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿ ಆಗುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಗುತ್ತಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ.
ಜೊತೆಗೆ ಕೊರೊನಾ ವೈರಸ್ ಪ್ರಕರಣಗಳನ್ನು ನಿರ್ವಹಿಸಲು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ವೈದ್ಯರು, ಸಿಬ್ಬಂದಿಯ ಸೇವಾ ಅವಧಿಯನ್ನು ಏ.1ರಿಂದ ಸೆ.30ರವರೆಗೆ ಅನ್ವಯಿಸುವಂತೆ ವಿಸ್ತರಿಸಲು ಅನುಮತಿ ನೀಡಿ ಆದೇಶಿಸಲಾಗಿರುತ್ತದೆ.