ಬೆಂಗಳೂರು :ಸುಳ್ಳು ಹೇಳುವ ಚಾಳಿಗೆ ಚಿಕಿತ್ಸೆ ಇಲ್ಲ. 'ಸಿದ್ದಕಲೆ'ಯ ನಿಷ್ಣಾತರಿಗೆ(ನಿಪುಣ) ಸುಳ್ಳೇ ದೇವರು, ಸುಳ್ಳೇ ಸರ್ವಸ್ವ. ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಸುಳ್ಳು ಹೇಳಿಕೊಂಡು ಓಡಾಡುವ 'ಗೊಬೆಲಪ್ಪ'ನ 'ಬೂಸಿ ಭಜನೆ' ಹೊಸದೇನೂ ಅಲ್ಲ. ರಾಜಕೀಯ ಜನ್ಮಕೊಟ್ಟ ಪಕ್ಷದ ಬಗ್ಗೆಯೇ ಹಗುರವಾಗಿ ಮಾತನಾಡುವ 'ಕೃತಘ್ನ'ತೆಗೆ ಇದೇ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ಡಿಕೆ, ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. 'ಬ್ರೂಟಸ್ ಮನಸ್ಥಿತಿ'. ಸಂದರ್ಭಕ್ಕೆ ತಕ್ಕಂತೆ 'ಬಣ್ಣ ಬದಲಿಸುವ ಊಸರವಳ್ಳಿ ದುಸ್ಥಿತಿ'. ಆಪರೇಷನ್ ಕಮಲದಲ್ಲಿ ಕುಮ್ಮಕ್ಕಾಗಿ ಮೈತ್ರಿ ಸರ್ಕಾರ ಕೆಡವಿದ ಸಿದ್ದಶೂರನ ಸಾರಥ್ಯದಲ್ಲಿ 'ಆಪರೇಷನ್ ಹಸ್ತ' ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.