ಕರ್ನಾಟಕ

karnataka

ETV Bharat / city

'ನೀವು ಪ್ರಧಾನಿಯಾಗೋದು ನನ್ನಾಸೆ'... ರಾಹುಲ್​ ಜತೆ ರಣತಂತ್ರ ಹೆಣೆದ ದೊಡ್ಡಗೌಡ್ರು

ಲೋಕಸಭೆ ಚುನಾವಣೆ ಸಂಬಂಧ ಜೆಡಿಎಸ್​ ವರಿಷ್ಠ ದೇವೇಗೌಡರು ಹಾಗೂ ಕಾಂಗ್ರೆಸ್​ ರಾಹುಲ್ ಗಾಂಧಿ ರಣತಂತ್ರ ಹೆಣೆದಿದ್ದಾರೆ.

ನೀವು ಪ್ರಧಾನಿಯಾಗೋದು ನನ್ನಾಸೆ ಎಂದು ದೇವೇಗೌಡರು , ರಾಹುಲ್ ಗಾಂಧಿಗೆ ಹೇಳಿದ್ದಾರೆ

By

Published : Mar 21, 2019, 10:12 PM IST

ಬೆಂಗಳೂರು: ಲೋಕಸಭಾ ಚುನಾವಣೆಯ ನಂತರ ನಿಮ್ಮನ್ನು ಪ್ರಧಾನಿ ಹುದ್ದೆಯಲ್ಲಿ ನೋಡುವ ಆಸೆ ನನಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‍ಗೆ ಕಬ್ಬಿಣದ ಕಡಲೆಯಾಗಿರುವ ಕ್ಷೇತ್ರಗಳನ್ನು ಗೆಲ್ಲಿಸಿಕೊಡಲು ಸಕಲ ಪ್ರಯತ್ನ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭರವಸೆ ನೀಡಿದ್ದಾರೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಕೂ ಹೆಚ್ಚು ಸೀಟುಗಳನ್ನು ಮೈತ್ರಿಕೂಟ ಗೆಲ್ಲುತ್ತದೆ ಎಂದು ಭರವಸೆ ನೀಡಲಾರೆ. ಆದರೆ, ನಿಶ್ಚಿತವಾಗಿ 15 ರಿಂದ 16 ಸೀಟುಗಳನ್ನು ಗೆಲ್ಲಿಸಿಕೊಡಲು ಶ್ರಮಿಸುತ್ತೇನೆ ಎಂದು ದೇವೇಗೌಡರು ಹೇಳಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಕೆಲ ಕ್ಷೇತ್ರಗಳು ಕಾಂಗ್ರೆಸ್ ಪಾಲಿಗೆ ಕಷ್ಟಕರ ಕ್ಷೇತ್ರಗಳಾಗಿವೆ. ಇಲ್ಲೆಲ್ಲ ನಿಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ನನಗಿರುವ ಅನುಭವವನ್ನು ಸಂಪೂರ್ಣವಾಗಿ ಧಾರೆ ಎರೆಯುತ್ತೇನೆ ಎಂದಿದ್ದಾರೆ.

ಬಿಜೆಪಿ ಮರಳಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಸಕಲ ಯತ್ನಗಳನ್ನು ನಡೆಸಿದೆ. ಬಿಜೆಪಿಗೆ ಹಲವು ರೀತಿಯ ಅನುಕೂಲಗಳಿವೆ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಹುದ್ದೆಗೆ ಏರಿಸಲು ದೇಶದ ದೊಡ್ಡ ದೊಡ್ಡ ಉದ್ಯಮಿಗಳ ಪಡೆ ಸಿದ್ಧವಾಗಿದೆ. ಈ ಕಾರಣ ನಾವು ಕರ್ನಾಟಕದಲ್ಲಿ ಸಂಪೂರ್ಣ ಪ್ರಯತ್ನ ನಡೆಸಬೇಕಾಗಿದೆ. ಕಾಂಗ್ರೆಸ್ ಸ್ಪರ್ಧಿಸಿದ ಕಡೆಯಲ್ಲೆಲ್ಲ ಜೆಡಿಎಸ್​ನ ಮತಗಳು ಚಲಾವಣೆ ಆಗುವಂತೆ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಯಾವುದೇ ಒಂದು ಪಕ್ಷ ಸುಮ್ಮನೆ ಉಳಿದುಕೊಂಡರೂ ಗಂಡಾಂತರ ತಪ್ಪಿದ್ದಲ್ಲ. ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲರೂ ಶ್ರಮ ವಹಿಸಬೇಕು. ಈ ಅಂಶವನ್ನು ನಿಮ್ಮ ಪಕ್ಷದ ರಾಜ್ಯ ನಾಯಕರಿಗೆ ಮನದಟ್ಟು ಮಾಡಿಕೊಡಿ ಎಂದು ದೇವೇಗೌಡರು, ರಾಹುಲ್​ಗೆ ಹೇಳಿದ್ದಾರೆ ಎನ್ನಲಾಗ್ತಿದೆ.

ಮೈತ್ರಿಕೂಟದ ಅಭ್ಯರ್ಥಿಗಳು ಸ್ಪರ್ಧಿಸಿದಾಗ ಟಿಕೆಟ್ ಸಿಗದ ಸ್ಥಳೀಯ ನಾಯಕರು, ಕಾರ್ಯಕರ್ತರಿಗೆ ನೋವಾಗುವುದು ಸಹಜ. ಆದರೆ ಅದನ್ನೆಲ್ಲ ಮರೆತು ದುಡಿಯಬೇಕಾದ ಅನಿವಾರ್ಯತೆ ಇದೆ. ನೀವು ದೇಶದ ಪ್ರಧಾನಿ ಹುದ್ದೆಗೇರಬೇಕು ಎಂಬುದು ನನ್ನಾಸೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಕ್ಯಾಂಡಿಡೇಟ್​ಗಳು ನಿಂತ ಕಡೆಯಲ್ಲೆಲ್ಲ ಜೆಡಿಎಸ್ ಮತಗಳನ್ನು ಈ ಅಭ್ಯರ್ಥಿಗಳಿಗೇ ಹಾಕಿಸಲು ಮನಃಪೂರ್ವಕವಾಗಿ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು ಎಂದು ತಿಳಿದುಬಂದಿದೆ.

ನಾವು ಮೈತ್ರಿಕೂಟದ ಉಭಯ ಪಕ್ಷಗಳ ವತಿಯಿಂದ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ರಹಸ್ಯ ಕಾರ್ಯಪಡೆಯನ್ನು ನೇಮಕ ಮಾಡಬೇಕು. ಪ್ರತಿ ದಿನದ ಕಾರ್ಯ ಚಟುವಟಿಕೆಗಳ ಮಾಹಿತಿ ಪಡೆಯಬೇಕು. ಹೀಗೆ ಮಾಡುವುದರ ಮೂಲಕ ಪರಸ್ಪರರು ಯಾವ ಅನುಮಾನವೂ ಇಲ್ಲದಂತೆ ಮುಂದುವರೆಯಲು ಸಾಧ್ಯ. ಆದ್ದರಿಂದ ಈ ಕೆಲಸ ಮಾಡಲೇಬೇಕು ಎಂದು ಅವರು ಇದೇ ಸಂದರ್ಭದಲ್ಲಿ ರಾಹುಲ್‍ಗಾಂಧಿ ಅವರಿಗೆ ವಿವರಿಸಿದ್ದಾರೆ.

ಅಂದ ಹಾಗೆ ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಕ್ಯಾಂಡಿಡೇಟ್ ಇಲ್ಲದಿರುವುದರಿಂದ ಕಾಂಗ್ರೆಸ್ ಕ್ಯಾಂಡಿಡೇಟ್ ವೀರಪ್ಪ ಮೊಯ್ಲಿ, ಕೋಲಾರದಲ್ಲಿ ಕೆ.ಹೆಚ್.ಮುನಿಯಪ್ಪ ಬಿಜೆಪಿಯಿಂದ ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ. ಹಾಗೆಯೇ ಮೈಸೂರಿನಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ವಿರುದ್ಧ ಬಿಜೆಪಿ ಪ್ರಬಲ ಸ್ಪರ್ಧೆ ನೀಡುವುದು ನಿಶ್ಚಿತವಾಗಿರುವುದರಿಂದ ಅಲ್ಲೂ ಜೆಡಿಎಸ್ ಮತಗಳು ಕೊಂಚವೂ ಅಲುಗಾಡದಂತೆ ನೋಡಿಕೊಳ್ಳುವ ಅನಿವಾರ್ಯತೆ ಇದೆ. ಆ ಕೆಲಸವನ್ನು ನಾವು ಮಾಡುತ್ತೇವೆ. ಅದೇ ರೀತಿ ಜೆಡಿಎಸ್ ಕ್ಯಾಂಡಿಡೇಟ್‍ಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲೂ ರಾಜ್ಯದ ಕಾಂಗ್ರೆಸ್ ನಾಯಕರು ಮನಃಪೂರ್ವಕವಾಗಿ ಕೆಲಸ ಮಾಡುವಂತೆ ನೀವು ನೋಡಿಕೊಳ್ಳಿ. ಅಂತಿಮವಾಗಿ ನಾವು ಹೆಚ್ಚು ಸೀಟುಗಳನ್ನು ಪಡೆದಷ್ಟೂ ನಿಮಗೆ ಅನುಕೂಲ ಎಂದು ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ.

ಇದೇ ರೀತಿ ಮಾರ್ಚ್ 31 ರಂದು ನಡೆಯಲಿರುವ ಉಭಯ ಪಕ್ಷಗಳ ಬೃಹತ್ ಸಮಾವೇಶದ ನಂತರ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿ ಮೈತ್ರಿ ಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ. ಉಭಯ ಪಕ್ಷಗಳ ನಾಯಕರು ವಿವಿಧ ತಂಡಗಳಲ್ಲಿ ರಾಜ್ಯಪ್ರವಾಸ ನಡೆಸುವುದು ಒಂದು ಭಾಗ. ಉಳಿದಂತೆ ನಾನು ಸೇರಿದಂತೆ ಕೆಲ ನಾಯಕರು ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ತೆರಳುತ್ತೇವೆ ಎಂದು ದೇವೇಗೌಡರು ವಿವರಿಸಿದ್ದಾರೆ.

ಇದರ ಬೆನ್ನಲ್ಲೇ ದೇವೇಗೌಡರ ಜತೆ ನಿರಂತರ ಸಂಪರ್ಕದಲ್ಲಿದ್ದು, ಕರ್ನಾಟಕದಲ್ಲಿ ಹೆಚ್ಚು ಸೀಟ್​ಗಳನ್ನು ಗೆಲ್ಲಲು ರಣತಂತ್ರ ಹೆಣೆಯುವಂತೆ ರಾಹುಲ್‍ಗಾಂಧಿ, ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರ ಎಂದೂ ಹೇಳಲಾಗಿದೆ.

ABOUT THE AUTHOR

...view details