ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ಗ್ರ್ಯಾಂಡ್ ಸ್ಟೆಪ್ಸ್ ಮೂಲಕ ವಿಧಾನಸೌಧಕ್ಕೆ ಆಗಮಿಸಿದರು.
ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಗ್ರ್ಯಾಂಡ್ ಸ್ಟೆಪ್ಸ್ ಪ್ರವೇಶ ಈ ಬಾರಿ ಮುಂದುವರಿದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಈ ಬಾರಿಯ ಜಂಟಿ ಅಧಿವೇಶನದ ಭಾಷಣಕ್ಕಾಗಿ ಪೂರ್ವ ದಿಕ್ಕಿನಲ್ಲಿರುವ ಗ್ರ್ಯಾಂಡ್ ಸ್ಟೆಪ್ಸ್ ಮೂಲಕ ವಿಧಾನಸೌಧಕ್ಕೆ ಪ್ರವೇಶ ಮಾಡಿದರು.
ಗ್ರ್ಯಾಂಡ್ ಸ್ಟೆಪ್ಸ್ ಮೂಲಕ ವಿಧಾನಸೌಧಕ್ಕೆ ರಾಜ್ಯಪಾಲರ ಪ್ರವೇಶ ಅಶ್ವಪಡೆ ಬೆಂಗಾವಲಿನ ಮೂಲಕ ಆಗಮಿಸಿದ ರಾಜ್ಯಪಾಲರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಬಸವರಾಜ್ ಬೊಮ್ಮಾಯಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಬಳಿಕ ರಾಜ್ಯಪಾಲರ ಜೊತೆಗೂಡಿ ಎಲ್ಲರೂ ಗ್ರ್ಯಾಂಡ್ ಸ್ಟೆಪ್ಸ್ ಮೂಲಕ ವಿಧಾನಮಂಡಲ ಜಂಟಿ ಅಧಿವೇಶನಕ್ಕೆ ಪ್ರವೇಶಿಸಿದರು.
ಇದನ್ನೂ ಓದಿ:ಚೊಚ್ಚಲ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ತಯಾರಿ: ಏನೆಲ್ಲಾ ಸವಾಲು?
ಈ ಹಿಂದೆ ಗ್ರ್ಯಾಂಡ್ ಸ್ಟೆಪ್ಸ್ ಮೂಲಕ ರಾಜ್ಯಪಾಲರು ಜಂಟಿ ಅಧಿವೇಶನ ವೇಳೆ ವಿಧಾನಸೌಧಕ್ಕೆ ಪ್ರವೇಶ ಕೊಡುತ್ತಿದ್ದರು. 1999-2000ರಲ್ಲಿ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಕೊನೆಯ ಬಾರಿಗೆ ಗ್ರ್ಯಾಂಡ್ ಸ್ಟೆಪ್ಸ್ ನಿಂದ ಎಂಟ್ರಿ ಕೊಟ್ಟಿದ್ದರು. ಬಳಿಕ ಈ ಪ್ರವೇಶ ಪದ್ಧತಿ ಸ್ಥಗಿತವಾಗಿತ್ತು. ಇಷ್ಟು ದಿನ ವಿಧಾನಸೌಧದ ಗ್ರೌಂಡ್ ಫ್ಲೋರ್ನಿಂದ ಲಿಫ್ಟ್ ಮೂಲಕ ಲಾಂಜ್ಗೆ ಬಂದು ವಿಧಾನಸಭೆಗೆ ಬರಲಾಗುತ್ತಿತ್ತು.