ಕರ್ನಾಟಕ

karnataka

By

Published : Jun 23, 2021, 9:23 PM IST

ETV Bharat / city

ಈ ಬಾರಿಯೂ ಸಾಮಾನ್ಯ ವರ್ಗಾವಣೆ ಇಲ್ಲ: ಅನುಮತಿ ನೀಡುವಂತೆ ಸಚಿವರು, ನೌಕರರ ಒತ್ತಡ

ಈ ಬಾರಿಯೂ ಎರಡನೇ ಕೋವಿಡ್ ಅಲೆ ಹಿನ್ನೆಲೆ ಸಾಮಾನ್ಯ ವರ್ಗಾವಣೆ ಅನುಮಾನವಾಗಿದೆ. ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಸಿಎಂ ಸಚಿವರಿಗೆ ಈ ಸಂಬಂಧ ಸ್ಪಷ್ಟಪಡಿಸಿದ್ದಾರೆ.‌ ಈ ಬಾರಿ ವರ್ಗಾವಣೆಗೆ ಅವಕಾಶ ಇಲ್ಲ. ತುರ್ತು ಪ್ರಕರಣ ಇದ್ದರೆ, ತಮ್ಮ ಗಮನಕ್ಕೆ ತನ್ನಿ, ನಾನೇ ವರ್ಗಾವಣೆ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ.

no general transfer this time
ಸಾಮಾನ್ಯ ವರ್ಗಾವಣೆ ಇಲ್ಲ

ಬೆಂಗಳೂರು: ಕೋವಿಡ್ ಹಿನ್ನೆಲೆ ಕಳೆದ ಬಾರಿ ಸಾಮಾನ್ಯ ವರ್ಗಾವಣೆಯನ್ನು ತಡೆ ಹಿಡಿಯಲಾಗಿತ್ತು. ಕೋವಿಡ್ ಎರಡನೇ ಅಲೆಯ ಹಿನ್ನೆಲೆ ಈ ಬಾರಿಯೂ ಸಾಮಾನ್ಯ ವರ್ಗಾವಣೆ ಬಹುತೇಕ ಅನುಮಾನವಾಗಿದೆ. ಆದರೆ, ಕೆಲ ಮಂತ್ರಿಗಳು ಸಾಮಾನ್ಯ ವರ್ಗಾವಣೆಗೆ ಅನುಮತಿ ನೀಡುವಂತೆ ಸಿಎಂರಲ್ಲಿ ಒತ್ತಾಯಿಸುತ್ತಿದ್ದಾರೆ. ಇತ್ತ ಸರ್ಕಾರಿ ನೌಕರರು ಸಾಮಾನ್ಯ ವರ್ಗಾವಣೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಓದಿ: ಬೆಂಗಳೂರಿನಲ್ಲಿ ಯಾವುದೇ Delta+ ಪ್ರಕರಣ ಪತ್ತೆಯಾಗಿಲ್ವಂತೆ... ಆದರೂ ಈ ಎಲ್ಲ ಮುಂಜಾಗ್ರತೆ

ಪ್ರತಿ ವರ್ಷ ಜೂನ್ ಮತ್ತು ಜುಲೈ ವೇಳೆಗೆ ಗ್ರೂಪ್ ಬಿ ಮತ್ತು ಸಿ ಸಿಬ್ಬಂದಿಯನ್ನು ಸಾಮಾನ್ಯ ವರ್ಗಾವಣೆ ಮಾಡಲಾಗುತ್ತದೆ. 2020-21ನೇ ಸಾಲಿನಲ್ಲಿ ಕೋವಿಡ್ ಹಿನ್ನೆಲೆ ಸಾಮಾನ್ಯ ವರ್ಗಾವಣೆಯನ್ನು ತಡೆ ಹಿಡಿಯಲಾಗಿತ್ತು. ಬಳಿಕ ಇಲಾಖೆ ಸಚಿವರಿಗೆ ವರ್ಗಾವಣೆಯ ಹೊಣೆ ಹೊರಿಸಲಾಗಿತ್ತು. ಬಳಿಕ 2021ನೇ ಸಾಲಿನ ಸಾಮಾನ್ಯ ವರ್ಗಾವಣೆ ಆರಂಭಗೊಳ್ಳುವವರೆಗೆ ಇಲಾಖಾ ಹಂತದಲ್ಲಿ ಯಾವುದೇ ವರ್ಗಾವಣೆ ಮಾಡಕೂಡದು. ವರ್ಗಾವಣೆ ಮಾಡಲೇಬೇಕಾಗಿದ್ದಲ್ಲಿ ಮುಖ್ಯಮಂತ್ರಿ ಅನುಮೋದನೆ ಅಗತ್ಯ ಎಂದು ಸರ್ಕಾರ ಷರತ್ತು ವಿಧಿಸಿತ್ತು.

2021ನೇ ಸಾಲಿನಲ್ಲಿ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗಬೇಕಿದೆ. ಅಲ್ಲಿಯವರೆಗೆ ಆಡಳಿತಾತ್ಮಕವಾಗಿ ಅವಶ್ಯವಿರುವ ಖಾಲಿ ಸ್ಥಾನಗಳನ್ನು ತುಂಬಲು ಮಾತ್ರ ವರ್ಗಾವಣೆಗಳನ್ನು ಮಾಡಬಹುದು. ಅದರ ಹೊರತು, ಬೇರೆ ಯಾವುದೇ ವರ್ಗಾವಣೆಗೆ ಅವಕಾಶ ಇಲ್ಲ ಎಂದು ಸೂಚನೆ ನೀಡಲಾಗಿತ್ತು.

ಈ ಬಾರಿಯೂ ಸಾಮಾನ್ಯ ವರ್ಗಾವಣೆ ಡೌಟ್:

ಈ ಬಾರಿಯೂ ಎರಡನೇ ಕೋವಿಡ್ ಅಲೆ ಹಿನ್ನೆಲೆ ಸಾಮಾನ್ಯ ವರ್ಗಾವಣೆ ಅನುಮಾನವಾಗಿದೆ. ಈ ಸಂಬಂಧ ಈಗಾಗಲೇ ಸಿಎಂ ಸಂಕೇತ ನೀಡಿದ್ದಾರೆ. ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಸಿಎಂ ಸಚಿವರಿಗೆ ಈ ಸಂಬಂಧ ಸ್ಪಷ್ಟಪಡಿಸಿದ್ದಾರೆ.‌ ಈ ಬಾರಿ ವರ್ಗಾವಣೆಗೆ ಅವಕಾಶ ಇಲ್ಲ. ಅಂಥ ತುರ್ತು ಪ್ರಕರಣ ಇದ್ದರೆ, ತಮ್ಮ ಗಮನಕ್ಕೆ ತನ್ನಿ, ನಾನೇ ವರ್ಗಾವಣೆ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಹೀಗಾಗಿ ಈ ಬಾರಿಯೂ ಸಾಮಾನ್ಯ ವರ್ಗಾವಣೆ ಬಹುತೇಕ ಅನುಮಾನವಾಗಿದೆ. ಇತ್ತ ಇಲಾಖೆ ಸಚಿವರಿಗೂ ವರ್ಗಾವಣೆ ಹೊಣೆ ನೀಡದಿರಲು ನಿರ್ಧರಿಸಲಾಗಿದೆ. ಏನೇ‌ ಇದ್ದರೂ ಸಿಎಂ ಮೂಲಕವೇ ತುರ್ತು ವರ್ಗಾವಣೆ ಮಾಡಲಾಗುತ್ತದೆ.

ಸಚಿವರಿಂದ ಸಾಮಾನ್ಯ ವರ್ಗಾವಣೆಗೆ ಒತ್ತಾಯ:

ಇತ್ತ ಕೆಲ ಸಚಿವರು ಸಾಮಾನ್ಯ ವರ್ಗಾವಣೆಗೆ ಅವಕಾಶ ನೀಡುವಂತೆ ಸಿಎಂಗೆ ಒತ್ತಡ ಹೇರುತ್ತಿದ್ದಾರೆ. ಕೋವಿಡ್ ಅಬ್ಬರ ಕಡಿಮೆಯಾಗಿದ್ದು, ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಗೆ ಅನುಮತಿ ನೀಡುವಂತೆ ಸಚಿವ ಅರವಿಂದ ಲಿಂಬಾವಳಿ ಸೇರಿ ಕೆಲ ಸಚಿವರು ಸಿಎಂ‌ ಬಳಿ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಸಚಿವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಸರ್ಕಾರಿ ನೌಕರರಿಂದಲೂ ವರ್ಗಾವಣೆಗೆ ಪಟ್ಟು:

ಇತ್ತ ರಾಜ್ಯ ಸರ್ಕಾರಿ ನೌಕರರ ಸಂಘದವರೂ ಈ ಬಾರಿ ಸಾಮಾನ್ಯ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾರೆ. ಕಳೆದ ಬಾರಿ ಸಾಮಾನ್ಯ ವರ್ಗಾವಣೆ ನಡೆದಿಲ್ಲ. ಈ ಬಾರಿ ಸಾಮಾನ್ಯ ವರ್ಗಾವಣೆಗೆ ಅನುಮತಿ ನೀಡಬೇಕು.‌ ಕಳೆದ ಬಾರಿ ವರ್ಗಾವಣೆ ಸಮರ್ಪಕವಾಗಿ ಆಗಿಲ್ಲ. ಹಲವು ಸರ್ಕಾರಿ ನೌಕರರಿಗೆ ವರ್ಗಾವಣೆಯ ಅನಿವಾರ್ಯತೆ ಇರುತ್ತದೆ. ಇನ್ನು ಕೆಲವರಿಗೆ ಆರೋಗ್ಯದ ಸಮಸ್ಯೆ ಇರುತ್ತದೆ. ಹೀಗಾಗಿ ಸಾಮಾನ್ಯ ವರ್ಗಾವಣೆ ಮಾಡಬೇಕು ಎಂಬುದು ನಮ್ಮ ಮನವಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

ಇತ್ತ ಸಚಿವಾಲಯ ಸರ್ಕಾರಿ ನೌಕರರ ಸಂಘದವರು ಸಾಮಾನ್ಯ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದಾರೆ. ಎಲ್ಲರಿಗೂ ಸಿಎಂ ಬಳಿ ಹೋಗಿ ವರ್ಗಾವಣೆಯ ಮನವಿ ಪತ್ರ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಸಿಎಂಗೂ ಕೋವಿಡ್ ಸಂದರ್ಭದಲ್ಲಿ ಸಮಯ ಸಿಗುವುದಿಲ್ಲ. ಹೀಗಾಗಿ ಈ ಬಾರಿ ಸಾಮಾನ್ಯ ವರ್ಗಾವಣೆ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಆಗ್ರಹಿಸಿದ್ದಾರೆ.

ABOUT THE AUTHOR

...view details