ಕರ್ನಾಟಕ

karnataka

ETV Bharat / city

ಬೆಂಗಳೂರು: ಪೌರ ಕಾರ್ಮಿಕರ ಜೊತೆಗಿನ ಸರ್ಕಾರದ ಸಂಧಾನ ಸಫಲ

ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದು ಸರ್ಕಾರದ ಸಂಧಾನ ಕಾರ್ಯ ಸಫಲವಾಗಿದೆ.

Enter Keyword here.. government accepted the demands of the civic workers
ಗುತ್ತಿಗೆ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ

By

Published : Jul 1, 2022, 10:37 PM IST

ಬೆಂಗಳೂರು:ಸೇವಾ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಗುತ್ತಿಗೆ ಪೌರ ಕಾರ್ಮಿಕರ ಜೊತೆಗೆ ಸರ್ಕಾರ ನಡೆಸಿದ ಸಂಧಾನ ಸಫಲವಾಗಿದೆ. ಬೇಡಿಕೆ ಈಡೇರಿಕೆ ಕುರಿತು ಲಿಖಿತ ಪತ್ರ ಕೊಟ್ಟ ತಕ್ಷಣ ಹೋರಾಟ ಕೈಬಿಡುವುದಾಗಿ ಗುತ್ತಿಗೆ ಪೌರಕಾರ್ಮಿಕರ ಸಂಘ ಘೋಷಿಸಿದೆ.

ರಾಜ್ಯಾದ್ಯಂತ ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಪೌರಕಾರ್ಮಿಕರ ಸಮಸ್ಯೆಗಳ ಕುರಿತು ಸಭೆ ನಡೆಯಿತು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಬೈರತಿ ಬಸವರಾಜ್, ಎಂಟಿಬಿ ನಾಗರಾಜ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ನಗರಾಭಿವೃದ್ಧಿ ಇಲಾಖೆ ಎಸಿಎಸ್ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಜಯ ನಾಗಭೂಷಣ, ಜಲಮಂಡಳಿ ವ್ಯವಸ್ಥಾಪಕ ನಿರ್ದೇಶಕ ಜಯರಾಮ ಮತ್ತು ಇತರರು ಭಾಗವಹಿಸಿದ್ದರು.


ಗುತ್ತಿಗೆ ಪೌರ ಕಾರ್ಮಿಕ ಬೇಡಿಕೆಗಳ ಕುರಿತು ಸಭೆಯಲ್ಲಿ ಸುದೀರ್ಘವಾದ ಚರ್ಚೆ ನಡೆಯಿತು. ಅಧಿಕಾರಿಗಳ ಸಲಹೆ, ಸಚಿವರ ಅಭಿಪ್ರಾಯ ಪಡೆದ ಸಿಎಂ ಬಸವರಾಜ ಬೊಮ್ಮಾಯಿ ಸೇವಾ ಖಾಯಮಾತಿ ಸೇರಿದಂತೆ ಕೆಲ ಭರವಸೆಗಳನ್ನು ಈಡೇರಿಸಲು ಸಮ್ಮತಿಸಿದರು. ಪೌರ ಕಾರ್ಮಿಕ ಸಂಘದ ಜೊತೆ ಮಾತುಕತೆ ನಡೆಸಿ ಸಂಧಾನ ಸಭೆ ನಡೆಸಿದರು. ಸಭೆ ಸಫಲವಾಗಿದ್ದು, ಹೋರಾಟ ಕೈಬಿಡಲು ಪೌರ ಕಾರ್ಮಿಕರ ಸಂಘ ಲಿಖಿತ ಭರವಸೆ ನೀಡಬೇಕು ಎನ್ನುವ ಷರತ್ತಿನೊಂದಿಗೆ ಒಪ್ಪಿಗೆ ನೀಡಿತು. ನಂತರ ಸರ್ಕಾರದ ನಿರ್ಧಾರವನ್ನು ಫ್ರೀಡಂ ಪಾರ್ಕ್​ನಲ್ಲಿ ಹೋರಾಟ ನಡೆಸುತ್ತಿರುವ ಪೌರ ಕಾರ್ಮಿಕರಿಗೆ ತಲುಪಿಸುವಂತೆ ಸಚಿವ ಬೈರತಿ ಬಸವರಾಜ್ ಅವರನ್ನು ಸರ್ಕಾರದ ಪರವಾಗಿ ಸಿಎಂ ಕಳುಹಿಸಿಕೊಟ್ಟರು.

ಸಿಎಂ ಸಭೆ ಬಳಿಕ ಮಾತನಾಡಿದ ಗುತ್ತಿಗೆ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ, ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ಕೇಳಿದ್ದೇವೆ, ಅದಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಮೂರು ತಿಂಗಳ ಒಳಗೆ ರಾಜ್ಯದ ಎಲ್ಲಾ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹೊರ ಗುತ್ತಿಗೆ ರದ್ದು ಮಾಡಿ ನೇರ ಪಾವತಿ ವ್ಯವಸ್ಥೆ ಜಾರಿಗೆ ತರುವ ಎಂದು ಭರವಸೆ ನೀಡಿದ್ದಾರೆ ಎಂದರು.

ಇದರ ಜೊತೆಗೆ ನಮ್ಮ ಇತರ ಬೇಡಿಕೆಗಳಲ್ಲಿ ಮನೆ ಕಟ್ಟಲು ಪೌರ ಕಾರ್ಮಿಕರಿಗೆ 7 ಲಕ್ಷ ರೂ.ಗಳ ಗೃಹ ಭಾಗ್ಯ ಯೋಜನೆ, ಪೌರ ಕಾರ್ಮಿಕರ ಮಕ್ಕಳಿಗೆ ಎಲ್.ಕೆ.ಜಿ ಯಿಂದ ಸ್ನಾತಕೋತ್ತರ ಪದವಿವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡುವ ಯೋಜನೆ ಮಾಡುವ ಭರವಸೆ ನೀಡಿದ್ದಾರೆ. ಸದ್ಯ 700 ಜನಕ್ಕೆ ಒಬ್ಬ ಪೌರಕಾರ್ಮಿಕ ಇದ್ದಾರೆ ಅದನ್ನು 500 ಜನಕ್ಕೆ ಮಾಡುವಂತೆ ಮನವಿ ಮಾಡಿದ್ದು ಅದಕ್ಕೆ ಸಿಎಂ ಒಪ್ಪಿಕೊಂಡಿದ್ದಾರೆ. ಈ ಎಲ್ಲ ಬೇಡಿಕೆಗಳನ್ನು ಮೂರು ತಿಂಗಳಲ್ಲಿ ಈಡೇರಿಸುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಸರ್ಕಾರದ ಭರವಸೆ ಹೊತ್ತು ಧರಣಿ ಸ್ಥಳಕ್ಕೆ ತೆರಳಿದ ಬೈರತಿ:ಸಚಿವ ಬೈರತಿ ಬಸವರಾಜ್ ಮಾತನಾಡಿ, ಇವತ್ತು ಪೌರಕಾರ್ಮಿಕರ ಮುಖಂಡರ ಜೊತೆ ಸಿಎಂ ಸಭೆ ನಡೆಸಿದ್ದಾರೆ, ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ತಿಳಿಸಿದ್ದಾರೆ. ಇನ್ನು ಎರಡೂರು ತಿಂಗಳಲ್ಲಿ ಈಡೇರಿಸುತ್ತೇವೆ ಎಂದಿದ್ದು ಅದಕ್ಕಾಗಿ ಸಿಎಂಗೆ ಧನ್ಯವಾದ ಸಲ್ಲಿಸುತ್ತೇನೆ. ಇವತ್ತು ಸಚಿವ ಸಂಪುಟದಲ್ಲೂ 2 ಸಾವಿರ ವೇತನ ಹೆಚ್ಚಳ ಮಾಡಲು ಅನುಮೋದನೆ ನೀಡಲಾಗಿದೆ. ಖಾಯಂ ನೇಮಕಾತಿ ಬಗ್ಗೆಯೂ ಸಿಎಂ ಭರವಸೆ ನೀಡಿದ್ದಾರೆ. ಈ ಸಿಹಿಸುದ್ದಿಯನ್ನು ಸಿಎಂ ನಿರ್ದೇಶನದ ಮೇರೆಗೆ ನಾನು ಪ್ರತಿಭಟನಾ ಸ್ಥಳಕ್ಕೆ ಹೋಗಿ ತಿಳಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ದೇವೇಗೌಡರ ಬಳಿ ಕ್ಷಮೆ ಕೋರಲು ರಾಜಣ್ಣಗೆ ಡಿ.ಕೆ.ಶಿವಕುಮಾರ್‌ ಸೂಚನೆ

ABOUT THE AUTHOR

...view details