ಆನೇಕಲ್:ಗ್ಯಾಸ್ ಪೈಪ್ ಸೋರಿಕೆಯಾಗಿ ಸ್ಫೋಟಗೊಂಡು 7 ಮಂದಿ ಗಾಯಗೊಂಡ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.
ಜಿಗಣಿ ಪೊಲೀಸ್ ಠಾಣೆಯ ಪಕ್ಕದ ಅಶ್ವತ್ಥ್ ರೆಡ್ಠಿ ಬಡಾವಣೆಯ ಮಂಜುನಾಥರೆಡ್ಡಿ ಎಂಬುವವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ರಾಜಸ್ಥಾನದ ಮೂಲದ ಕುಟುಂಬವೊಂದು ಈ ಮನೆಯಲ್ಲಿ ಬಾಡಿಗೆ ಪಡೆದು ವಾಸವಾಗಿದ್ದರು.
ಜಿಗಣಿಯಲ್ಲಿ ಅಡುಗೆ ಅನಿಲ ಪೈಪ್ ಸೋರಿಕೆಯಾಗಿ ಸ್ಫೋಟ: ಏಳು ಮಂದಿಗೆ ಗಾಯ ಬಾಡಿಗೆದಾರ ಜಗದೀಶ್ ಶನಿವಾರ ಬೆಳಗ್ಗೆ 8 ಗಂಟೆಗೆ ಅಡುಗೆ ಮನೆಯ ಸ್ವಿಚ್ ಆನ್ ಮಾಡಿದಾಗ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಗ್ಯಾಸ್ ಪೈಪ್ಗೂ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ಅಲ್ಲೇ ಇದ್ದ ಜಗದೀಶ್ಗೆ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದ ಸದ್ದಿಗೆ ಎಚ್ಚೆತ್ತ ಕುಟುಂಬಸ್ಥರು ಬಂದು ನೋಡಿದಾಗ ಜಗದೀಶ್ಗೆ ಬೆಂಕಿ ಹೊತ್ತಿಕೊಂಡಿದ್ದು ಕಂಡುಬಂದಿದೆ. ಈ ವೇಳೆ ರಕ್ಷಣೆಗೆ ಧಾವಿಸಿ ಬಂದಾಗ ಬೆಂಕಿಯ ಕೆನ್ನಾಲಿಗೆ ಅವರನ್ನೂ ಆವರಿಸಿಕೊಂಡಿದೆ.
ಮನೆಯಲ್ಲಿದ್ದವರ ಕಿರುಚಾಟ ಆಲಿಸಿದ ಪಕ್ಕದ ಮನೆಯ ವಲ್ಲಿ ಎಂಬುವವರು ಇವರ ರಕ್ಷಣೆಗೆ ಧಾವಿಸಿದ್ದಾರೆ. ಜಗದೀಶ್ನನ್ನು ಬೆಂಕಿಯಿಂದ ರಕ್ಷಿಸುವಾಗ ಅವರಿಗೂ ಬೆಂಕಿಯ ಸುಟ್ಟ ಗಾಯಗಳಾಗಿವೆ.
ಸ್ಥಳೀಯರು ಕೂಡ ದೊಡ್ಡ ಸದ್ದು ಕೇಳಿ ಹೌಹಾರಿದ್ದಾರೆ. ಅಗ್ನಿಶಾಮಕ ದಳ ಮತ್ತು ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ತೀವ್ರ ಗಾಯಗೊಂಡ ಜಗದೀಶ್ ಮತ್ತು ಇನ್ನಿತರರನ್ನು ಜಿಗಣಿ ಸುಹಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಫೋಟದಿಂದ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಅಲ್ಲದೇ ಪಕ್ಕದ ಮನೆಗೂ ಹಾನಿಯಾಗಿದ್ದು, ಗಾಜುಗಳು ಚೂರುಚೂರಾಗಿವೆ. ರಾಜಸ್ಥಾನ ಮೂಲದ ಈ ಕುಟುಂಬ ಹೊದಿಕೆಗಳು, ದಿಂಬುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿದ್ದರು ಎನ್ನಲಾಗಿದೆ. ಜಗದೀಶ್ ದೇಹ ಬೆಂಕಿಗೆ ಸುಟ್ಟಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.