ಬೆಂಗಳೂರು: ಮಡಿಕೇರಿ ಪಟ್ಟಣ ಹೊರವಲಯದ ಕರ್ಣಂಗೇರಿ ಗ್ರಾಮದ ಸ್ಟೋನ್ ಹಿಲ್ ಮೇಲೆ ಅನಧಿಕೃತ ಹಾಗೂ ಅವೈಜ್ಞಾನಿಕವಾಗಿ ಘನತ್ಯಾಜ್ಯ ಸುರಿಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ( ಕೆಎಸ್ಪಿಸಿಬಿ) ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಈ ಬಗ್ಗೆ ಮಂಡಳಿಯ ಅಧ್ಯಕ್ಷರು ಪ್ರಮಾಣಪತ್ರ ಸಲ್ಲಿಸುವಂತೆ ತಾಕೀತು ಮಾಡಿದೆ.
ಅವೈಜ್ಞಾನಿಕ ಕಸ ವಿಲೇವಾರಿ ಪ್ರಶ್ನಿಸಿ ಎಸ್ಆರ್ವಿಕೆ ಹೆಸರಿನ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಹಲವು ವರ್ಷಗಳಿಂದ ಯಾವುದೇ ಅನುಮತಿ ಇಲ್ಲದೆ ಜನವಸತಿ ಪ್ರದೇಶಕ್ಕೆ ಹತ್ತಿರದಲ್ಲಿ ಅವೈಜ್ಞಾನಿಕವಾಗಿ ಘನತ್ಯಾಜ್ಯ ಸುರಿಯುತ್ತಿದ್ದರು ಕೆಎಸ್ ಪಿಸಿಬಿ ಯಾವುದೇ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯದ ಪರಮಾವಧಿ. ಸಮಸ್ಯೆ ಗೊತ್ತಿದ್ದು ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧ ಮಂಡಳಿ ಅಧ್ಯಕ್ಷರು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.
ಅರ್ಜಿಯ ಸಾರಾಂಶ: ಮಡಿಕೇರಿ ಪಟ್ಟಣದ ಬಳಿ ಇರುವ ಕರ್ಣಂಗೇರಿ ಗ್ರಾಮ ಬೆಟ್ಟ ಪ್ರದೇಶ. ಇಲ್ಲಿನ ಸ್ಟೋನ್ ಹಿಲ್ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಇಂತಹ ಬೆಟ್ಟದ ನೆತ್ತಿಯ ಮೇಲೆ 2007ರಿಂದಲೂ ಕಸ ಸುರಿಯುತ್ತಿದ್ದು, ಇಪ್ಪತ್ತು ಅಡಿ ಎತ್ತರಕ್ಕೆ ಕಸದ ರಾಶಿ ಬಿದ್ದಿದೆ. ಸಮೀಪದಲ್ಲೇ ಜನವಸತಿ ಇದ್ದು ಸ್ಥಳೀಯರು ಆತಂಕದಲ್ಲಿ ಬದುಕುತ್ತಿದ್ದಾರೆ.
ಈ ಕುರಿತು ಜಿಲ್ಲಾಡಳಿತ ಮತ್ತು ನಗರಸಭೆಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಅರಣ್ಯ ಇಲಾಖೆಯ ವಿರೋಧದ ನಡುವೆಯೂ ಜಿಲ್ಲಾಧಿಕಾರಿ ನಗರಸಭೆಗೆ 6 ಎಕರೆ ಭೂಮಿ ಮಂಜೂರು ಮಾಡಿರುವ ಆದೇಶವನ್ನು ರದ್ದುಪಡಿಸಬೇಕು. ಈ ಜಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಅನುಮತಿ ನೀಡದಂತೆ ಕೆಎಸ್ಪಿಸಿಬಿ ಸೂಚಿಸಬೇಕು. ಹಾಗೆಯೇ, ತ್ಯಾಜ್ಯ ವಿಲೇವಾರಿಗೆ ಪಟ್ಟಣದ ಹೊರವಲಯದಲ್ಲಿ ಸೂಕ್ತ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.