ಬೆಂಗಳೂರು: ಈ ಮುನ್ನ ಬೆಂಗಳೂರು ಹೊರತು ಪಡಿಸಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೆಚ್ಚು ಕೊರೊನಾ ಪ್ರಕರಣ ವರದಿಯಾಗಿತ್ತು. ಇದೀಗ ಮೈಸೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹೋಟೆಲ್ ಕೆಲಸಗಾರನೊಂದಿಗೆ ಸಂಪರ್ಕದಲ್ಲಿದ್ದ ನಾಲ್ವರಿಗೆ ಕೊರೊನಾ ಸೋಂಕು ದೃಢ - ಬೆಂಗಳೂರಿನ ಶಿವಾಜಿನಗರದಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ದೃಢ
ಬೆಂಗಳೂರಿನ ಶಿವಾಜಿನಗರದ ರಿಜೆಂಟ್ ಹೋಟೆಲ್ ಹೌಸ್ ಕೀಪಿಂಗ್ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಾಜಿನಗರದ ರಿಜೆಂಟ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ (ಪಿ-653) ಹೌಸ್ ಕೀಪಿಂಗ್ ವ್ಯಕ್ತಿಯ ಜೊತೆ ಸಂಪರ್ಕ ಇದ್ದ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆತನ ಜೊತೆ ಶಿವಾಜಿನಗರದ ಚಾಂದಿನಿ ಚೌಕ್ ಮನೆಯಲ್ಲಿ ವಾಸವಿದ್ದ ನಾಲ್ವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 12 ಮಂದಿ ಪ್ರಥಮ ಸಂಪರ್ಕಿತರಲ್ಲಿ ನಾಲ್ವರಿಗೆ ಕೊರೊನಾ ದೃಢಪಟ್ಟಿದ್ದು ಉಳಿದ ಎಂಟು ಜನರ ಫಲಿತಾಂಶ ನಾಳೆ ಬರಲಿದೆ. ಈ ನಾಲ್ವರೂ ಅಸ್ಸಾಂ, ಮಣಿಪುರ ಮೂಲದ ವ್ಯಾಪಾರಿಗಳಾಗಿದ್ದು, 19,22,25 ಹಾಗೂ 40 ವರ್ಷದವರಾಗಿದ್ದಾರೆ. ಇವರೆಲ್ಲಾ ಲಾಕ್ಡೌನ್ ಆದ ಬಳಿಕ ಊಟಕ್ಕಾಗಿ ಶಿವಾಜಿನಗರದಲ್ಲಿ ಸುತ್ತಾಡಿದ್ದು ಇವರ ಸಂಪರ್ಕಿತರನ್ನು ಕೂಡಾ ಈಗ ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.