ಕರ್ನಾಟಕ

karnataka

ETV Bharat / city

ಸುಷ್ಮಾ ಸ್ವರಾಜ್​​ ನಿಧನಕ್ಕೆ ಸಿಎಂ ಬಿಎಸ್​​ವೈ, ಕೇಂದ್ರ ಸಚಿವ ಸದಾನಂದಗೌಡ ಸಂತಾಪ - Central Minister DV Sadananda Gowda

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಹಲವು ಸಂತಾಪ ಸೂಚಿಸಿದ್ದಾರೆ.

ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನ: ಸಿಎಂ ಯಡಿಯೂರಪ್ಪ, ಸಚಿವ ಸದಾನಂದ ಗೌಡರಿಂದ ಸಂತಾಪ

By

Published : Aug 7, 2019, 11:59 AM IST

ಬೆಂಗಳೂರು/ನವದೆಹಲಿ: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ ತೀವ್ರ ಸಂತಾಪ ಸೂಚಿಸಿದ್ದಾರೆ.

ನವದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಬಿಎಸ್​ವೈ ಮಾತನಾಡಿ, ದೇಶ ಕಂಡ ಅಪ್ರತಿಮ‌ ಸಾಧಕಿ‌ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್​​ರನ್ನು ಕಳೆದುಕೊಂಡು ನಾವು ಬಡವಾಗಿದ್ದೇವೆ. ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಅವರು ಬಳ್ಳಾರಿಗೆ ಬರುತ್ತಿದ್ದುದು ಈಗಲೂ ನನ್ನ ಕಣ್ಣ ಮುಂದಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಗ ಒಂದು‌ ತಿಂಗಳ ಕಾಲ ಎಲ್ಲಾ ಕಡೆ ಅವರ ಜೊತೆಯಲ್ಲಿಯೇ ಪ್ರವಾಸ ಮಾಡಿದ್ದೆ. ಸಭೆಗಳಲ್ಲಿ ಭಾಗಿಯಾಗಿದ್ದೆ. ಪ್ರತಿ ದಿನ ಹತ್ತು ಹನ್ನೆರಡು ಗಂಟೆ ಓಡಾಟ ಮಾಡುತ್ತಿದ್ದರು. ಕನ್ನಡದಲ್ಲೇ ಭಾಷಣ ಶುರು ಮಾಡಿದ್ದರು ಎಂದು ಸುಷ್ಮಾ‌ ಸ್ವರಾಜ್ ಜೊತೆಗಿನ ಒಡನಾಟವನ್ನು ಸಿಎಂ ಯಡಿಯೂರಪ್ಪ ನೆನಪಿಸಿದರು.

ಬಳ್ಳಾರಿ ಚುನಾವಣೆ ವೇಳೆ ಒಂದು ಹೋಟೆಲ್​​ನಲ್ಲಿ ವಾಸ್ತವ್ಯ ಮಾಡಿದ್ದರು. ಅವರ ರೀತಿಯ ಶ್ರಮ ಜೀವಿಯನ್ನು ನಾನು ನೋಡಿಲ್ಲ. ಪ್ರತಿ ದಿನ ಹತ್ತಾರು ಸಭೆಗಳಲ್ಲಿ‌ ಹತ್ತಿಪ್ಪತ್ತು ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಜನರ ಮುಂದೆ ನಿರರ್ಗಳವಾಗಿ ಭಾಷಣ ಮಾಡುತ್ತಿದ್ದರು. ಅಂತಹ ಒಬ್ಬ ಉತ್ತಮ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಂತಾಪ ಸೂಚಿಸಿದರು.

ಲೋಕಸಭೆಯಲ್ಲಿ ಗಂಟೆಗಟ್ಟಲೆ ನಿರರ್ಗಳವಾಗಿ ಮಾತನಾಡುತ್ತಿದ್ದರೆ ಸದಸ್ಯರು ತನ್ಮಯರಾಗಿ ಕೇಳುವಂತೆ ಇರುತ್ತಿತ್ತು. ಸಂಘ ಪರಿವಾರದ ಚಿಂತನೆ ಜೊತೆಗಿದ್ದ ಅವರು, ಮೋದಿ ಬರುವ ಮೊದಲೇ ಪಕ್ಷ ಸಂಘಟನೆಗೆ ಓಡಾಟ ಮಾಡಿದ್ದಾರೆ. ಒಮ್ಮೆ ಶಿವಮೊಗ್ಗದಲ್ಲಿ ಮಹಿಳಾ ಸಮಾವೇಶ ನಡೆಸಿದ್ದಾಗ 50 ಸಾವಿರ ಜನ ಸೇರಿದ್ದರು. ಆಗ ಇದು ಜಿಲ್ಲಾ ಮಟ್ಟದ ಸಮಾವೇಶವೋ ರಾಜ್ಯ ಮಟ್ಟದ್ದೋ ಅಂತಾ ಕೇಳಿದ್ದರು ಸುಷ್ಮಾ. ಅಂದರೆ ಅಷ್ಟು‌ ಸಂಖ್ಯೆಯಲ್ಲಿ ಜನ ಬರ್ತಾ ಇದ್ದರು ಎಂದರು.

ದೆಹಲಿ ಸಿಎಂ, ಕೇಂದ್ರ ಸಚಿವೆ ಹೀಗೆ ಅನೇಕ ಜವಾಬ್ದಾರಿ ಹೊತ್ತಿದ್ದರು. ಇನ್ನೂ ಹತ್ತಾರು ವರ್ಷ ಬಾಳಿ ಬದುಕಬೇಕು ಎನ್ನುವ ಅಪೇಕ್ಷೆ ಇತ್ತು. ಆದರೆ ಕಳೆದ ರಾತ್ರಿ ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನ: ಸಿಎಂ ಯಡಿಯೂರಪ್ಪ, ಸಚಿವ ಸದಾನಂದ ಗೌಡರಿಂದ ಸಂತಾಪ

ಸಚಿವ ಸದಾನಂದಗೌಡ ಸಂತಾಪ:

ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಮಾತನಾಡಿ, ನಮ್ಮ ದೇಶ ಕಂಡ ಪ್ರತಿಭಾವಂತ ಮಹಿಳಾ ರಾಜಕಾರಣಿಗಳಲ್ಲಿ ಸುಷ್ಮಾರ ಹೆಸರು ಅಗ್ರ ಸ್ಥಾನದಲ್ಲಿದೆ. ಅವರ ವಾಕ್ ಚಾತುರ್ಯ, ವಿಚಾರ ವಿಮರ್ಶೆ, ಬುದ್ಧಿವಂತಿಕೆ, ದೈವ ಭಕ್ತಿ, ಸರಳ ಜೀವನ ಎಲ್ಲವೂ ಅನುಕರಣೀಯ. ರಾಜಕೀಯವಾಗಿ ಅನೇಕ ಸ್ಥಾನಮಾನ ಪಡೆದ ಅವರು ವಿದೇಶಾಂಗ ಸಚಿವೆಯಾಗಿ ಸಲ್ಲಿಸಿದ ಸೇವೆ ಜನಮಾನಸದಲ್ಲಿ ಸ್ಥಿರಸ್ಥಾಯಿಯಾಗಿ ನಿಲ್ಲುವಂತದ್ದು. ನನ್ನ ರಾಜಕೀಯ ಜೀವನದಲ್ಲಿ ಅವರನ್ನು ತುಂಬಾ ಸಮೀಪದಿಂದ ಬಲ್ಲೆ. ತಾವು ನಂಬಿಕೊಂಡಿದ್ದ ಸಿದ್ಧಾಂತದಲ್ಲಿ ಎಂದಿಗೂ ರಾಜಿ ಮಾಡಿ ಕೊಂಡವರಲ್ಲ. ಸಾಮಾನ್ಯರ ಸಂಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ, ಭಾರತದಿಂದ ತನಗರಿವಿಲ್ಲದೆ ಪಾಕಿಸ್ತಾನಕ್ಕೆ ಹೋಗಿ ಸೇರಿದ್ದ ಕಿವುಡ ಮತ್ತು ಮೂಗಿ ಬಾಲಕಿ ಗೀತಾಳನ್ನು ಮತ್ತೆ ನಮ್ಮ ದೇಶಕ್ಕೆ ಕರೆ ತರುವಲ್ಲಿ ತೋರಿಸಿದ ಮಾತೃ ಹೃದಯ ಎಲ್ಲವೂ ನೆನಪಿನಂಗಳದಲ್ಲಿ ಇಂದಿಗೂ ಇದೆ ಎಂದರು.

ತುರ್ತು ಪರಿಸ್ಥಿತಿಯ ಸಂದರ್ಭ ಅವರು ಸಿಡಿದೆದ್ದ ರೀತಿ, ಕಿರಿ ವಯಸ್ಸಿನಲ್ಲೇ ಹರಿಯಾಣದ ಸಂಪುಟ ದರ್ಜೆ ಸಚಿವರಾಗಿ, ಬಿಜೆಪಿ ಮಹಿಳಾ ವಕ್ತಾರರಾಗಿ, ದೆಹಲಿಯ ಮುಖ್ಯಮಂತ್ರಿಯಾಗಿ ಎಲ್ಲವೂ ಸಾಧನೆಯ ಪುಟಗಳಲ್ಲಿ ಸೇರಬೇಕಾದವು. ಈಗ ಮತ್ತೊಮ್ಮೆ ಅನಂತಕುಮಾರ್ ನೆನಪಾಗುತ್ತಿದ್ದಾರೆ. ಸುಷ್ಮಾರವರನ್ನು ಕರ್ನಾಟಕ ರಾಜಕೀಯಕ್ಕೆ ಕರೆತರುವಲ್ಲಿ ತೋರಿಸಿದ ಆಸ್ಥೆ ಅವರನ್ನು ಕನ್ನಡಿಗರು ಇನ್ನಷ್ಟು ಹತ್ತಿರ ಬರುವಂತೆ ಮಾಡಿತು. ನಮ್ಮೆಲ್ಲರ ಸಹೋದರಿಯಾಗಿ ಚಿರಕಾಲ ನಿಲ್ಲುವಂತೆ ಆಯಿತು. ಅಮ್ಮ ನಿಮ್ಮ ದೇಹ ಇಲ್ಲಿ ಇಲ್ಲದೇ ಇರಬಹುದು. ನೀವು ಬಿಟ್ಟು ಹೋದ ಆದರ್ಶಗಳು ಮುಂದಿನ ಪೀಳಿಗೆಯ ಜನತೆಗೆ ದಾರಿದೀಪ. ಅಮ್ಮ ಇದೇ ನನ್ನ ನಮನ ಎಂದು ಸಚಿವ ಡಿ.ವಿ.ಸದಾನಂದಗೌಡ ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details