ಕರ್ನಾಟಕ

karnataka

ETV Bharat / city

ಕರ್ನಾಟಕದಲ್ಲಿ ಕನ್ನಡಕ್ಕೇ ಮೊದಲ ಸ್ಥಾನ: ಅಮಿತ್​ ಶಾ 'ಹಿಂದಿ' ಹೇಳಿಕೆಗೆ ಸಿದ್ದರಾಮಯ್ಯ ಆಕ್ಷೇಪ

ಹಿಂದಿಯನ್ನು ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಬಳಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸರಣಿ ಟ್ವೀಟ್​ ಮಾಡಿದ್ದಾರೆ.

siddaramaih
ಸಿದ್ದರಾಮಯ್ಯ

By

Published : Apr 8, 2022, 3:08 PM IST

ಬೆಂಗಳೂರು:ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಹಿಂದಿಯನ್ನು‌ ಬಳಸಬೇಕೆಂದು ಕೇಂದ್ರ ಗೃಹಸಚಿವ ಅಮಿತ್ ಶಾ ಫರ್ಮಾನು ಹೊರಡಿಸಿರುವುದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಒಬ್ಬ ಸ್ವಾಭಿಮಾನಿ‌ ಕನ್ನಡಿಗನಾಗಿ‌ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕರ್ನಾಟಕದಲ್ಲಿ ಕನ್ನಡಕ್ಕೇ ಮೊದಲ ಸ್ಥಾನ. ಯಾವುದೇ ಒಂದು ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯವಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

ಪ್ರತಿಭಟಿಸುವ ಕಾಲ ಸನ್ನಿಹಿತ:ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವ ರೀತಿಯಲ್ಲಿ ಬಿಂಬಿಸುವ ಜೊತೆಯಲ್ಲಿ, ರಾಜ್ಯ ಭಾಷೆಗಳನ್ನು ದಮನಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದನ್ನು ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳು ಕೂಡಿ ಪ್ರತಿಭಟಿಸುವ ಕಾಲ ಸನ್ನಿಹಿತವಾಗಿದೆ. ಗುಜರಾತಿನಿಂದ ಬಂದಿರುವ ಅಮಿತ್ ಶಾ ಮಾತೃಭಾಷೆ ಗುಜರಾತಿ. ಇವರು ತಮ್ಮ ಮಾತೃಭಾಷೆಯನ್ನೇ ಕಡೆಗಣಿಸಿ ಹಿಂದಿ ಭಾಷೆಯ ಗುಲಾಮಗಿರಿ‌ ಮಾಡುತ್ತಿರುವುದು ವಿಷಾದನೀಯ ಎಂದು ಬರೆದುಕೊಂಡಿದ್ದಾರೆ.

ಅಮಿತ್ ಶಾ ಅವರ ತವರು ಗುಜರಾತ್ ರಾಜ್ಯದ ಮಣ್ಣಿನ‌ ಮಗನಾದ ಮಹಾತ್ಮ ಗಾಂಧೀಜಿ ಬಹು ಸಂಸ್ಕೃತಿ, ಬಹುಭಾಷೆಗಳ ಪ್ರತಿಪಾದಕರಾಗಿದ್ದರು. ಆದರೆ ಶಾಗೆ ಗಾಂಧೀಜಿಯವರಿಗಿಂತ ಏಕ ಸಂಸ್ಕೃತಿ, ಏಕಭಾಷೆಯ ಪ್ರತಿಪಾದಕರಾದ ಸೂಡೊ ರಾಷ್ಟ್ರೀಯವಾದಿ ಸಾವರ್ಕರ್ ಪ್ರಿಯರಾಗಿರುವುದು ದುರಂತ ಎಂದು ಕಿಡಿ‌ ಕಾರಿದ್ದಾರೆ.

ಸಾಂಸ್ಕೃತಿಕ ಭಯೋತ್ಪಾದನೆ:ತಮಿಳುನಾಡು, ಕೇರಳ,‌ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಹಿಂದಿಯನ್ನು ಅಧಿಕೃತ ಸಂಪರ್ಕ ಭಾಷೆಯಾಗಿ ಬಳಸುವುದಿಲ್ಲ. ಅವುಗಳ ಜೊತೆಯಲ್ಲಿ ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆಯಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಜಗದೀಶ್ ಶೆಟ್ಟರ್ ದೆಹಲಿ‌ ಪ್ರವಾಸದ ಬಗ್ಗೆ ವಿಶೇಷ ಅರ್ಥ ಬೇಡ : ಸಚಿವ ಎಸ್​ಟಿ ಸೋಮಶೇಖರ್

ABOUT THE AUTHOR

...view details