ಬೆಂಗಳೂರು :ರೈತ ಸಂಘಟನೆಗಳ ಆರು ದಿನದ ಅಹೋರಾತ್ರಿ ಧರಣಿ ಬಳಿಕವೂ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಅಂಗೀಕರಿಸಿದ ಸರ್ಕಾರದ ವಿರುದ್ಧ ರೈತರು ಹಿಡಿಶಾಪ ಹಾಕಿದರು. ಸಿಎಂ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಸರ್ಕಾರ ರೈತರನ್ನು ಹಗುರವಾಗಿ ತೆಗೆದುಕೊಂಡಿದೆ. ರಾಜ್ಯಪಾಲರು ಈ ಮಸೂದೆಗೆ ಅಂಕಿತ ಹಾಕಬಾರದು. ಜನರ ಅನಿಸಿಕೆಗಳಿಗೆ ರಾಜ್ಯಪಾಲರು ಮಾನ್ಯತೆ ನೀಡಬೇಕು. ಐಕ್ಯ ಹೋರಾಟ ಸಮಿತಿಯಿಂದ ಹೋರಾಟಗಳು ಮುಂದುವರೆದಿವೆ. ಸೋಮವಾರ ಬಹಳಷ್ಟು ಸಂಘಟನೆಗಳು ಬೆಂಬಲ ನೀಡಲಿದ್ದು, ಕರ್ನಾಟಕ ಬಂದ್ ಯಶಸ್ವಿಯಾಗಲಿದೆ.
ಭೂಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಮುಂದುವರೆದ ರೈತರ ಪ್ರತಿಭಟನೆ ಎಲ್ಲಾ ಸಂಘಟನೆಗಳು ಟೌನ್ ಹಾಲ್ ಮುಂಭಾಗದಿಂದ ಬೆಳಗ್ಗೆ ಹತ್ತು ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಕರವೇ, ಜಯ ಕರ್ನಾಟಕ ಸಂಘಟನೆ, ಕನ್ನಡ ಚಳವಳಿ, ಬೆಂಗಳೂರು ಗ್ರಾಮಾಂತರ ವಕೀಲರು ಬಂದ್ಗೆ ಬೆಂಬಲ ನೀಡಿದ್ದಾರೆ. ಅನ್ನದಾತರ ರಕ್ಷಣೆಗೆ ರಾಜ್ಯದ ಜನ ನಿಲ್ಲಬೇಕು. ಮತದಾನದ ಮೊದಲು ಜನ ನಿಮ್ಮ ಜೊತೆ ನಾವಿದ್ದೇವೆ ಎಂದು ತೋರಿಸಿ ಕೊಡಬೇಕು. ಬೆಂಗಳೂರಿನಲ್ಲಿ ಜನಪರ ಕನ್ನಡಪರ ಸಂಘಟನೆಗಳು ಸ್ಪಂದನೆ ಕೊಡಬೇಕು ಎಂದು ಕರೆ ನೀಡಿದರು.
ರೈತ ಮುಖಂಡ ಬಡಲಗಪುರ ನಾಗೇಂದ್ರ ಮಾತನಾಡಿ, ಕೊನೆಗೂ ಯಡಿಯೂರಪ್ಪ ರೈತ ಸಮುದಾಯಕ್ಕೆ ವಿಷ ಹಾಕಿ ಬಿಟ್ಟರು. ನಿನ್ನೆ ಕೂಡ ಸಭೆ ವಿಫಲ ಆಯ್ತು. ಹಸಿರು ಟವೆಲ್ ಹಾಕಿಕೊಂಡು ಮೂರು ಸಲ ಸಿಎಂ ಆದ್ರು. ರೈತರ ಮಗ ಅಂದ್ರು. ಆದರೆ, ಸಿಎಂ ಯಡಿಯೂರಪ್ಪ ರೈತರ ಮಗ ಅಲ್ಲ- ಕಾರ್ಪೊರೇಟ್ ಕಂಪನಿಗಳ ಸಾಕು ಮಗ. ನೀವು ಕಾರ್ಪೊರೇಟ್ ಕಂಪನಿ ಮಗ ಆಗಿರಿ, ಮಕ್ಕಳನ್ನೂ ದತ್ತು ಕೊಡಿ ಎಂದು ಕಿಡಿಕಾರಿದರು. ನಾವು 6 ಕೋಟಿ ಜನ ಇದ್ದೀವಿ, ನಾವು ಕಾನೂನು ಮಾಡ್ತೀವಿ. ಬಿಜೆಪಿ ಪಕ್ಷಕ್ಕೆ ಕಲಾವಕಾಶ ಇದೆ, ಈ ಜನ ವಿರೋಧಿ ಕಾಯ್ದೆ ವಾಪಸು ಪಡೆಯಬೇಕೆಂದು ಆಗ್ರಹಿಸಿದರು.