ಬೆಂಗಳೂರು: ಮೈಸೂರು ಸಕ್ಕರೆ ಕಾರ್ಖಾನೆ ಖಾಸಗೀಕರಣಗೊಳಿಸುವ ಬಗ್ಗೆ ವಿಧಾನಪರಿಷತ್ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಕೇಳಿದ ಪ್ರಶ್ನೆ, ದೊಡ್ಡಮಟ್ಟದ ಚರ್ಚೆಗೆ ಕಾರಣವಾಯಿತು.
ಮೈಸೂರು ಸಕ್ಕರೆ ಕಾರ್ಖಾನೆ ಖಾಸಗೀಕರಣ ಮಾಡುವ ಮುನ್ನ, ಇನ್ನೊಮ್ಮೆ ಎಲ್ಲರ ಜೊತೆ ಸಭೆ ನಡೆಸುವ ಭರವಸೆ ಸಿಎಂ ನೀಡಿದ ನಂತರ ಚರ್ಚೆಗೆ ಕೊನೆ ಹಾಡಲಾಯಿತು.
ಶ್ರೀಕಂಠೇಗೌಡರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂಟಿವಿ ನಾಗರಾಜ್, ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿ ಪುನಶ್ಚೇತನಗೊಳಿಸುವ ಉದ್ದೇಶ ಇದೆ ಎಂದು ತಿಳಿಸಿದ್ದು, ಆದೇಶ ಸಂಖ್ಯೆಯನ್ನು ಸಹ ಪ್ರಸ್ತಾಪಿಸಿದ್ದರು.
ಆದರೆ, ಮೈಸೂರು ಮಹಾರಾಜರು ಕೊಡುಗೆಯಾಗಿ ನೀಡಿದ ಈ ಕಾರ್ಖಾನೆಯನ್ನು ಸರ್ಕಾರವೇ ಪುನಶ್ಚೇತನಗೊಳಿಸಬೇಕು. ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೂರು ಕೋಟಿ ರೂಪಾಯಿ ಅನುದಾನ ನೀಡಿದ್ದರು. ಕಡಿಮೆ ಮೊತ್ತದ ನಷ್ಟ ಇರುವ ಕಾರ್ಖಾನೆಯನ್ನು ಸರ್ಕಾರ ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಿದರೆ, ಖಾಸಗಿಯವರ ಕೈಗೆ ಹೋಗುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಶ್ರೀಕಂಠೇಗೌಡರು ಒತ್ತಾಯಿಸಿದರು.
ಪ್ರತಿಪಕ್ಷನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಇದು ಸರಿಯಾದ ಕ್ರಮ ಅಲ್ಲ. ಮೈಸೂರು ಮಹಾರಾಜರು ನೀಡಿದ ಕೊಡುಗೆ ಇದು. ಇದಕ್ಕೆ ಯಾವ ಸರ್ಕಾರವೂ ಪುನಶ್ಚೇತನ ಮಾಡುವ ಅವಕಾಶ ಸಿಕ್ಕಿಲ್ಲ. ಈಗ ಮಾರುವ ಅಧಿಕಾರ ಹೇಗೆ ಬರಲಿದೆ. ದಯವಿಟ್ಟು ಮಾರುವ ಯೋಚನೆ ಕೈಬಿಟ್ಟು, ಇದರ ಪುನಶ್ಚೇತನಕ್ಕೆ ಮುಂದಾಗಬೇಕು. ಹತ್ತರಿಂದ-ಹನ್ನೆರಡು ಕೋಟಿ ನಷ್ಟವನ್ನು ನಾವು ದೊಡ್ಡ ನಷ್ಟ ಎಂದು ಪರಿಗಣಿಸಲು ಸಾಧ್ಯವಿಲ್ಲ. ಡಿಸ್ಟಿಲರಿ ಇದೆ ಹಾಗೂ ಕಾರ್ಖಾನೆಗೆ ಸಂಬಂಧಿಸಿದ ಸಾಕಷ್ಟು ದೊಡ್ಡ ಮಟ್ಟದ ಜಮೀನು ಇದೆ. ಸಾಲ ತೀರಿಸುವ ಸಂಪನ್ಮೂಲ ಕಾರ್ಖಾನೆಯಲ್ಲಿ ಇರುವಾಗ ಖಾಸಗಿಯವರಿಗೆ ಪರಭಾರೆ ಮಾಡುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಸಿಎಂ ಒಂದು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಎಂ ಭರವಸೆ:
ಬಳಿಕ ಸಿ.ಎಂ.ಬಿಎಸ್ ಯಡಿಯೂರಪ್ಪ ಮಾತನಾಡಿ, ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಲೇಬೇಕೆಂಬ ಉದ್ದೇಶ ಸರ್ಕಾರಕ್ಕೆ ಇಲ್ಲ. ಸುಮಾರು 200 ಕೋಟಿ ರೂ. ವರೆಗೂ ಹಣ ನೀಡಲಾಗಿದೆ. ಅಲ್ಲಿ ಗುಂಪುಗಾರಿಕೆ ನಡೆದಿದೆ. ಖಾಸಗಿಯವರಿಗೆ ನೀಡುವ ಉದ್ದೇಶ ನಮಗೂ ಇಲ್ಲ. ನಾವೆಲ್ಲಾ ಸೇರಿ ಚರ್ಚಿಸೋಣ. ನಾವಂತೂ ಮುನ್ನಡೆಸುವ ಸ್ಥಿತಿ ಇಲ್ಲ. ಇದರಿಂದ ಇದರ ಬಗ್ಗೆ ಚರ್ಚಿಸಿ, ಇನ್ನೊಮ್ಮೆ ಯೋಚಿಸೋಣ. ಒಟ್ಟಾರೆ ಎಲ್ಲರ ಅಭಿಪ್ರಾಯ ಯಾವ ರೀತಿ ಇರುತ್ತದೆಯೋ ಅದರ ಪ್ರಕಾರವೇ ನಡೆಯಲಿ ಎಂದರು.
ಪ್ರತಿಪಕ್ಷ ಸದಸ್ಯರು ಮೈಸೂರು ಸಕ್ಕರೆ ಕಾರ್ಖಾನೆ ಖಾಸಗಿ ಅವರಿಗೆ ವಹಿಸುವುದನ್ನು ಮಂಡಿಸಲು ಮುಂದಾದಾಗ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ನಮಗೆ ಮುಖ್ಯಮಂತ್ರಿಗಳ ಮೇಲೆ ಭರವಸೆ ಇದೆ. ಸಭೆ ಸೇರಿ ಒಂದು ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಇಡೀ ಚರ್ಚೆಗೆ ಅಂತ್ಯ ಹಾಡಿದರು.
ಓದಿ:ಸಿಎಂ-ಯತ್ನಾಳ್ ಅಪರೂಪದ ಮುಖಾಮುಖಿ: ಇಬ್ಬರ ಮಧ್ಯೆ ನಡೆದ ಮಾತುಕತೆ ಏನು?